ಅಮಾಯಕರ ಜಿಲ್ಲಾಧಿಕಾರಿಗಳನ್ನು ಅಮಾನತುಗೊಳಿಸಿ; ಶಾಸಕ ಸಾ.ರಾ ಮಹೇಶ್

ಮೈಸೂರು, ಮೇ 4: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅಮಾಯಕರ ಸಾವಿಗೆ ಕಾರಣರಾದ ಡ್ರಗ್ ಕಂಟ್ರೋಲರ್‌, ಮೈಸೂರು ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಿ ಎಂದು ಶಾಸಕ ಸಾ.ರಾ ಮಹೇಶ್‌ ಆಗ್ರಹಿಸಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆಂದು ಆರೋಗ್ಯ ಸಚಿವರು ಹೇಳುತ್ತಾರೆ. ಹಾಗಾದರೆ, ಅದು ಸಾವಲ್ಲವೇ? ಇಷ್ಟೆಲ್ಲ ಅಧ್ವಾನದ ನಡುವೆಯೂ ಜಿಲ್ಲಾಧಿಕಾರಿಯನ್ನು ಯಾರ ಒತ್ತಡಕ್ಕೆ ಮಣಿದು ಇಲ್ಲೇ ಉಳಿಸಿಕೊಂಡಿದ್ದೀರೋ ಗೊತ್ತಿಲ್ಲ. ತಕ್ಷಣ ಇವರನ್ನು ಅಮಾನತು ಮಾಡದೇ ಯಾವ ರೀತಿಯ ತನಿಖೆ ಮಾಡುತ್ತೀರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮಂಡ್ಯ, ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಬಾರದು ಎಂದು ಅಧಿಕಾರಿಗೆ ಯಾರು ಒತ್ತಡ ಹಾಕಿದ್ದರು ಎಂಬುದನ್ನು ಬಹಿರಂಗಪಡಿಸಿ ಕ್ರಮಕೈಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ಇಂತಹ ಉದ್ಧಟತನದ ಅಧಿಕಾರಿಗಳನ್ನು ಇಟ್ಟುಕೊಂಡು ಜನರ ಜೀವನ ಜೊತೆ ಆಟ ಆಡಬೇಡಿ. ಮೈಸೂರಂತಹ ದೊಡ್ಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕ, ದಕ್ಷ, ಅನುಭವಿ ಅಧಿಕಾರಿಯನ್ನು ನೇಮಿಸಿ ಎಂದು ಸಾ.ರಾ ಮಹೇಶ್ ಆಗ್ರಹಿಸಿದರು.

ಇಲ್ಲದಿದ್ದರೆ ಚಾಮರಾಜನಗರದಂತೆ ಮೈಸೂರಿನಲ್ಲೂ ಅಧ್ವಾನ ಆಗಬಹುದು. ಡ್ರಗ್ ಕಂಟ್ರೋಲರ್‌, ಮೈಸೂರು ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ, ನಂತರ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ಚಾಮರಾಜನಗರ ಜಿಲ್ಲೆಗೆ ದಿನಕ್ಕೆ 350 ಆಕ್ಸಿಜನ್ ಸಿಲಿಂಡರ್‌ ಬೇಕು. ಆದರೆ, ಐದು ದಿನದಲ್ಲಿ ಬಂದಿದ್ದು ಕೇವಲ 650 ಸಿಲಿಂಡರ್‌. ಡ್ರಗ್ ಕಂಟ್ರೋಲರ್‌ ಈ ಬಗ್ಗೆ ಯಾಕೆ ಮಾಹಿತಿ ನೀಡಲಿಲ್ಲ? ಅಷ್ಟು ಪ್ರಮಾಣದಲ್ಲಿ ಯಾಕೆ ಒದಗಿಸಲು ಆಗುವುದಿಲ್ಲ ಎಂಬ ಮಾಹಿತಿಯನ್ನಾದರೂ ಅಧಿಕಾರಿಯು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಬೇಕಿತ್ತು. ಮಾಹಿತಿಯನ್ನೂ ನೀಡದೇ ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದರು.

Exit mobile version