ತಡೆರಹಿತವಾಗಿ ಅಧಿಕಾರವನ್ನು ಜೋ ಬೈಡೆನ್‌ಗೆ ಹಸ್ತಾಂತರಿಸುತ್ತೇನೆ: ಟ್ರಂಪ್

ವಾಷಿಂಗ್ಟನ್​, ಜ. 08: ಅಮೆರಿಕ ಸಂಸತ್​ ದಾಳಿ ಬೆನ್ನಲ್ಲೆ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಲನ್ನು ಕೊನೆಗೂ ಒಪ್ಪಿಕೊಂಡಿರುವುದಲ್ಲದೇ, ಸಂಸತ್​ ಭವನದ ದಾಳಿಯನ್ನು ಖಂಡಿಸಿದ್ದಾರೆ. ಸುಗಮ, ಕ್ರಮಬದ್ದ ಹಾಗೂ ತಡೆರಹಿತವಾಗಿ ಅಧಿಕಾರವನ್ನು ಜೋ ಬೈಡೆನ್​ಗೆ ಹಸ್ತಾಂತರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅಮೆರಿಕದ ರಾಜಕೀಯ ಇತಿಹಾಸದಲ್ಲಿ ತನ್ನ ಅಧಿಕಾರದ ಅವಧಿ ಸುವರ್ಣ ಯುಗ ಎಂಬ ಸ್ವಯಂ ವರ್ಣಿಸಿಕೊಂಡಿದ್ದಾರೆ. ಕಳೆದ ನವೆಂಬರ್​ನಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಟಿಕ್ ಪಕ್ಷದ ಜೋ ಬೈಡೆನ್​ ವಿರುದ್ಧ ಡೊನಾಲ್ಡ್​ ಟ್ರಂಪ್ ಹೀನಾಯವಾಗಿ ಸೋಲನ್ನಪ್ಪಿದ್ದರು. ಆದರೆ, ಈ ಸೋಲನ್ನು ಈವರೆಗೆ ಅವರು ಒಪ್ಪಿರಲಿಲ್ಲ. ಅಲ್ಲದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಫಲಿತಾಂಶವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಜನವರಿ 20ಕ್ಕೆ ಅವರು ತಮ್ಮ ಅಧಿಕಾರವನ್ನು ಜೋ ಬೈಡೆನ್​ಗೆ ಹಸ್ತಾಂತರಿಸಬೇಕು. ಆದರೆ, ಇದಕ್ಕೂ ಅವರು ತಕರಾರು ತೆಗೆದಿದ್ದರಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದರು. ಪರಿಣಾಮ ಇದರಿಂದ ಉದ್ರಿಕ್ತಗೊಂಡ ಡೊನಾಲ್ಡ್​ ಟ್ರಂಪ್ ಬೆಂಬಲಿಗರು ಕಳೆದ ಬುಧವಾರ ಅಮೆರಿಕದ ಸಂಸತ್​ ಭವನಕ್ಕೂ ದಾಳಿ ನಡೆಸುವ ಮೂಲಕ ಕೋಲಾಹಕ್ಕೆ ಕಾರಣರಾಗಿದ್ದರು. ಈ ವೇಳೆ ನಡೆದ ಪೊಲೀಸ್​ ಶೂಟ್​ಔಟ್​ಗೆ 4 ಜನ ಬಲಿಯಾಗಿದ್ದರು.  ಈ ಘಟನೆಯನ್ನು ವಿಶ್ವದ ಎಲ್ಲಾ ದೇಶದ ಪ್ರಮುಖ ನಾಯಕರೂ ಖಂಡಿಸಿದ್ದರು.

ಜನವರಿ 20 ರಂದು ಅಧಿಕಾರ ಹಸ್ತಾಂತರ:

ಗಲಭೆಯ ನಡುವೆಯೂ ಅಮೆರಿಕ ಸಂಸತ್‌ ಚುನಾವಣಾ ಫಲಿತಾಂಶಗಳನ್ನು ಪ್ರಮಾಣೀಕರಿಸಿದ್ದು, ನೂತನ ಆಡಳಿತ ಜನವರಿ 20 ರಂದು ಪ್ರಾರಂಭವಾಲಿದೆ. ಇದರ ಬೆನ್ನಿಗೆ ಮಾತನಾಡಿರುವ ಡೊನಾಲ್ಡ್​ ಟ್ರಂಪ್, “ಚುನಾವಣಾ ಫಲಿತಾಂಶಕ್ಕೆ ನನ್ನ ಸಮ್ಮತಿಯಿಲ್ಲವಾದರೂ, ಜನವರಿ 20 ರಂದು ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲಿದೆ. ನನ್ನ ಅಧಿಕಾರಾವಧಿ ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲೇ ಮೊದಲ ಅತ್ಯುತ್ತಮ ಸುವರ್ಣ ಅವಧಿಯಾಗಿದೆ. ಅದು ಈಗ ಕೊನೆಯಾಗುತ್ತಿದೆಯಾದರೂ, ಅವೆುರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸುವ ನಮ್ಮ ಹೋರಾಟದ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.

ಈ ವೇಳೆ ಬುಧವಾರ ತಮ್ಮ ಬೆಂಬಲಿಗರು ಅಮೆರಿಕ ಸಂಸತ್​ ಭವನಕ್ಕೆ ನುಗ್ಗಿ ನಡೆಸಿರುವ ಹಿಂಸಾಚಾರವನ್ನು ಖಂಡಿಸಿರುವ ಡೊನಾಲ್ಡ್ ಟ್ರಂಪ್, “ಇದೊಂದು ಹೇಯ ಕೃತ್ಯ. ಎಲ್ಲ ಅಮೆರಿಕನ್ನರಂತೆ ನಾನು ಕೂಡಾ ಹಿಂಸಾಚಾರ, ಕಾನೂನು ಬಾಹಿರ ಚಟುವಟಿಕೆ ಮತ್ತು ಹಾನಿಕರ ಘಟನೆಯಿಂದ ಅಸಮಾಧಾನಗೊಂಡಿದ್ದೇನೆ. ಅಮೆರಿಕ ಸಂಸತ್‌ ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗಿದ ಪ್ರತಿಭಟನಕಾರರನ್ನು ಹೊರಹಾಕಲು ತಕ್ಷಣ ನ್ಯಾಷನಲ್ ಗಾರ್ಡ್ ನಿಯೋಜಿಸಿ ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ. ಅಮೆರಿಕ ಯಾವತ್ತೂ ಕಾನೂನು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಲಭೆಕೋರರು ದೇಶೀಯ ಭಯೋತ್ಪಾದಕರು:

ಬುಧವಾರ ನಡೆದಿರುವ ಸಂಸತ್‌ ಕಟ್ಟಡದ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸಿರುವ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ಗಲಭೆಕೋರರನ್ನು ದೇಶೀಯ ಭಯೋತ್ಪಾದಕರು ಎಂದು ಕರೆದಿದ್ದಾರೆ. ಅಲ್ಲದೆ ಘಟನೆಗೆ ಡೊನಾಲ್ಡ್ ಟ್ರಂಪ್ ಕಾರಣ ಎಂದು ಆರೋಪಿಸಿರುವ ಅವರು, ಇದು ದೇಶದ ಇತಿಹಾಸದಲ್ಲೇ ಇದು ಅತ್ಯಂತ ಕರಾಳ ದಿನ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದ್ದು, ಜೋ ಬೈಡೆನ್​ ಜನವರಿ 20 ರಂದು ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ.

Exit mobile version