ಆನೆ ಓಡಿಸೋ ಭರದಲ್ಲಿ ಬೆಂಕಿ ಹಚ್ಚಿದ ದುರುಳರು: ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟ ಗಜರಾಜ

ತಮಿಳುನಾಡು, ಜ. 23: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆಯನ್ನು ಓಡಿಸೋ ಭರದಲ್ಲಿ ಆನೆಯೊಂದಕ್ಕೆ ಬೆಂಕಿ ಹಚ್ಚಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ತಮಿಳುನಾಡಿನ ಮುದುಮಲೈ ಹುಲಿ ಅಭಯಾರಣ್ಯ (ಎಂಟಿಆರ್) ಪ್ರದೇಶದ ಮಾಸಿನಗುಡಿಯಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಸಿನಗುಡಿ ಪ್ರದೇಶದಲ್ಲಿ ಆನೆಯನ್ನು ಓಡಿಸುವುದಕ್ಕಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಬಟ್ಟೆಗಳನ್ನು ಎಸೆದಿದ್ದಾರೆ.

ಹೊತ್ತಿ ಉರಿಯುತ್ತಿರುವ ಬಟ್ಟೆಯು ಆನೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದು, ಕೊನೆಗೆ ನೋವು ತಾಳಲಾರದೆ ಮೂರು ದಿನಗಳ ಬಳಿಕ ಪ್ರಾಣ ಬಿಟ್ಟಿದೆ.

ಸುಟ್ಟ ಗಾಯಗಳೊಂದಿಗೆ ಆನೆ ಕಾಡಿನತ್ತ ಓಡಿ ಹೋಗಿತ್ತು, ಈ ಎಲ್ಲ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ. ಆನೆಯ ಬೆನ್ನು ಹಾಗೂ ಕಿವಿಗೆ ತೀವ್ರವಾದ ಸುಟ್ಟು ಗಾಯಗಳಾಗಿವೆ ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ತೆಪ್ಪಕಾಡು ಆನೆ ಶಿಬಿರಕ್ಕೆ ಕೊಂಡೊಯ್ಯುವ ವೇಳೆಗೆ ಅದು ಪ್ರಾಣ ಬಿಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ.

ಬೆಂಕಿ ಹಚ್ಚಿದ ರಬ್ಬರ್ ಟೈರ್‌ಗಳನ್ನು ಆನೆಯ ಮೇಲೆ ಎಸೆಯಲಾಗಿದೆ ಎಂಬುದನ್ನು ಮುದುಮಲೈ ಹುಲಿ ಅಭಯಾರಣ್ಯದ ಡೆಪ್ಯೂಟಿ ಡೈರೆಕ್ಟರ್ ನಿರಾಕರಿಸಿದ್ದಾರೆ. ವಾಸ್ತವದಲ್ಲಿ ಬೆಂಕಿ ಹಚ್ಚಿದ ಬಟ್ಟೆಯನ್ನು ಎಸೆಯಲಾಗಿದೆ. ಇದನ್ನು ಆರೋಪಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version