ಬಿಎಸ್ಪಿ ತೊರೆದು ಅಧಿಕೃತವಾಗಿ ಬಿಜೆಪಿ ಸೇರಿದ ಕೊಳ್ಳೆಗಾಲ ಶಾಸಕ ಎನ್. ಮಹೇಶ್

ಬೆಂಗಳೂರು, ಆ. 05: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಎನ್. ಮಹೇಶ್ ಬುಧವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೊಂಡರು. ಇದೇ ವೇಳೆ ಎನ್.ಮಹೇಶ್ ಅವರ ಕೆಲವು ಬೆಂಬಲಿಗರು ಸಹ ಬಿಎಸ್ಪಿ ತೊರೆದು, ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಅವರು, ತಾವು ಅಧಿಕೃತವಾಗಿ ಬಿಜೆಪಿ ಸೇರುತ್ತಿದ್ದು, ಪಕ್ಷವನ್ನ ಸಧೃಢವಾಗಿ ಕಟ್ಟಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇನೆ. ನನ್ನೊಂದಿಗೆ ಮೈಸೂರು, ಬೆಂಗಳೂರು, ಮಂಡ್ಯ, ಕೊಡಗು ಭಾಗದ ಬೆಂಬಲಿಗರು ಸಾಂಕೇತಿಕವಾಗಿ ಬಿಜೆಪಿ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬಿಜೆಪಿ ಸೇರಲಿದ್ದಾರೆ ಎಂದರು.

ಎನ್.ಮಹೇಶ್ ಬಿಎಸ್‍ಪಿ ಪಕ್ಷದ ಚಿಹ್ನೆ ಅಡಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಕಾರಣ ಸಮ್ಮಿಶ್ರ ಸರ್ಕಾರದ ಜೊತೆ ಕೈಜೊಡಿಸಿ ಸಚಿವರು ಕೂಡ ಆಗಿದ್ದರು. ಬಳಿಕ ಆದ ರಾಜಕೀಯ ಬೆಳವಣಿಗೆಯಿಂದ ಬಿಎಸ್‍ಪಿ ಪಕ್ಷದಿಂದ ಮಯಾವತಿ ಎನ್.ಮಹೇಶ್ ಅವರನ್ನ ಉಚ್ಛಾಟನೆ ಮಾಡಿದರು.

ಶಾಸಕ ಎನ್ ಮಹೇಶ್ ಬಿಎಸ್‍ಪಿ ಪಕ್ಷದಿಂದ ಉಚ್ಛಾಟನೆ ಬಳಿಕ ಬಿಜೆಪಿ ಜೊತೆ ಹೆಚ್ಚು ಗುರುತಿಸಿಕೊಂಡು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಬಿಜೆಪಿಗೆ ಸೇರ್ಪಡೆ ಆಗುವ ಬಗ್ಗೆ ಎನ್.ಮಹೇಶ್ ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರು. ಹೀಗಾಗಿ ಬಿಜೆಪಿ ನಾಯಕರ ಸಲಹೆಯಂತೆ ಬಿಜೆಪಿ ಸೇರಿದ್ದಾರೆ.

Exit mobile version