‘ದ ಬ್ರಿಡ್ಜ್ ಮ್ಯಾನ್’ ಶೀರ್ಷಿಕೆ ಲಾಂಚ್

ಯುವ ನಿರ್ದೇಶಕ ಸಂತೋಷ್ ಕೊಡೆಂಕಿರಿ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ನಿರ್ಮಾಪಕ ಶಾಂತಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ‌ ಚಿತ್ರತಂಡದ ಜೊತೆ ಸೇರಿಕೊಂಡು ‘ದಿ ಬ್ರಿಡ್ಜ್ ಮ್ಯಾನ್’ ಎನ್ನುವ ಶೀರ್ಷಿಕೆ ಅನಾವರಣಗೊಳಿಸಿದರು.

“ಹೆಸರೇ ಹೇಳುವಂತೆ ಇದು ಅಪರೂಪದ ಸೇತುವೆಗಳನ್ನು ಕಟ್ಟುವ ಮೂಲಕ ಮನುಷ್ಯ ಸಂಬಂಧಗಳಿಗೆ ಸೇತುವೆಯಾದ ವ್ಯಕ್ತಿಯೊಬ್ಬರ ಕಥಾನಕ. ನೈಜ‌ ಘಟನೆಯನ್ನು ಆಧಾರಿಸಿಕೊಂಡು ಮಾಡಿರುವ ಈ ಕತೆಯ ನಿಜವಾದ ನಾಯಕ ಗಿರೀಶ್ ಭಾರಧ್ವಾಜ್ ಅವರು.
ದಕ್ಷಿಣ ಕನ್ನಡದಲ್ಲಿ ಹುಟ್ಟಿ, ಸುಳ್ಯದ ಗ್ರಾಮವೊಂದರಲ್ಲಿ ಬೆಳೆದು ಮಂಡ್ಯದಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನಲ್ಲಿ ವೃತ್ತಿ ಮಾಡಿ ತಮ್ಮ ಊರಿನ‌ ಸಮಸ್ಯೆ ನಿವಾರಣೆಗೆ ತೂಗು ಸೇತುವೆ ಮಾಡಿದವರು. ದೇಶದಾದ್ಯಂತ 240ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕಿಸುವ 139 ಸೇತುವೆಗಳನ್ನು ನಿರ್ಮಿಸಿದ ಕೀರ್ತಿ ಇವರದು. ಈ ಸಾಧನೆಯ ನಡುವೆ ಅವರಿಗೆ ಎದುರಾದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗಿದೆ” ಎಂದು ನಿರ್ದೇಶಕ ಸಂತೋಷ್ ಕೊಡೆಂಕಿರಿ ವಿವರಿಸಿದರು.

ಮೂರು ವರ್ಷಗಳ ಹಿಂದೆ ಭಾರತ ಸರ್ಕಾರದ ಪದ್ಮಶ್ರೀ ಪುರುಸ್ಕಾರಕ್ಕೆ ಭಾಜನರಾಗಿರುವ ಗಿರೀಶ್ ಭಾರಧ್ವಾಜ್ ಅವರ ಬದುಕಿನ ಕತೆ ಇರಿಸಿಕೊಂಡು ಸಿನಿಮಾ ಮಾಡುವುದು ಹೆಮ್ಮೆ ಅನಿಸುತ್ತದೆ ಎಂದ ನಿರ್ದೇಶಕ ಸಂತೋಷ್ ಮಾತಿಗೆ ನಿರ್ಮಾಪಕ‌ ಶಾಂತಕುಮಾರ್ ತಲೆದೂಗಿದರು. ಅಂದಹಾಗೆ ಚಿತ್ರಕ್ಕಾಗಿ ಎಂಬತ್ತರ ದಶಕದಲ್ಲಿ ಅವರು ಮೊದಲು‌ ನಿರ್ಮಿಸಿದ ತೂಗು ಸೇತುವೆಯನ್ನು ತೋರಿಸುವ ಜೊತೆಗೆ ಕಾಲಘಟ್ಟವನ್ನು ದೃಶ್ಯದ ಮೂಲಕ ಮರುಸೃಷ್ಟಿ ಮಾಡಲು ಪ್ರಯತ್ನಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಅಂದಹಾಗೆ ಅವರ ನಿರ್ಮಾಣದ ಎರಡನೇ ತೂಗು ಸೇತುವೆಯನ್ನು ಶಶಿಕುಮಾರ್ ನಟನೆಯ ‘ಸ್ವಾತಿ’ ಚಿತ್ರದಲ್ಲಿ ತೋರಿಸಲಾಗಿತ್ತೆಂದು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಸಂಗೀತ ನಿರ್ದೇಶಕ ವಿನಯ್ ಶರ್ಮ ಮಾತನಾಡಿ, ಸಿನಿಮಾ ಸಂಗೀತ ನಿರ್ದೇಶಕನಾಗಿ ಇದು ನನಗೆ ಮೊದಲ ಚಿತ್ರ. ಆದರೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಗಿಟಾರಿಸ್ಟ್ ಆಗಿದ್ದೆ. ಚಿತ್ರದಲ್ಲಿ ಮೊದಲ ಬ್ರಿಜ್ ನಿರ್ಮಾಣದ ವೇಳೆ, ನಾಯಕನ ಕುಟುಂಬದ ಜೊತೆಗೆ ಮತ್ತು
ಕೊನೆಯಲ್ಲಿ ಒಂದು ಮೋಟಿವೇಶನಲ್ ವಿಚಾರವನ್ನೊಳಗೊಂಡು ಹೀಗೆ ಸಾಂದರ್ಭಿಕವಾಗಿ ಹಾಡುಗಳನ್ನು ಬಳಸಲಾಗುತ್ತಿದೆ ಎಂದರು.
ಛಾಯಾಗ್ರಾಹಕ ಧನ್ವಿಕ್ ಗೌಡ ತಮಗೆ ಇದು ಐದನೇ ಸಿನಿಮಾ ಎಂದರು. ಸಂಕಲನಕಾರ ರಘು ಎಸ್ ಮಾಧ್ಯಮಗೋಷ್ಠಿಯಲ್ಲಿ‌ ಉಪಸ್ಥಿತರಿದ್ದರು.

Exit mobile version