ಕೊರೋನಾ ಎರಡನೇ ಅಲೆ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವ ದೆಹಲಿ, ಮಾ. 22: ದೇಶದಲ್ಲಿ ಕೊರೋನಾದ ಎರಡನೇ ಅಲೆ ಶುರುವಾಗಿದೆ. ಕಳೆದ ವರ್ಷದ ಕೊನೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕಿನ ಪ್ರಕರಣ ಇದೀಗ ಮತ್ತೆ ನಿಯಂತ್ರಣ ಮೀರಿದೆ.

ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತೊಮ್ಮೆ ಲಾಕ್​ಡೌನ್​ ಕುರಿತ ಮಾತುಗಳು ಕೇಳಿಬರುತ್ತಿದೆ. ಆದರೆ ಮತ್ತೆ ಲಾಕ್​ಡೌನ್​ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆಯಾದರೂ, ಜನರು ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೊರೋನಾ ನಿಯಮಾವಳಿಗಳನ್ನು ಪಾಲಿಸುತ್ತಿದ್ದಾರೆಯೇ? ಎಂದು ಕಟ್ಟುನಿಟ್ಟಾಗಿ ಗಮನಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೆಶನ ನೀಡಿರುವ ಕೇಂದ್ರ, “ಕೊರೋನಾ ಪ್ರಕರಣಗಳು ಹಠಾತ್ ಉಲ್ಬಣವಾಗಲು ಜನರು, ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಕಿಕ್ಕಿರಿದ ಸ್ಥಳಗಳಲ್ಲಿ ಕೊರೋನಾ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೆ ಇರುವುದೇ ಕಾರಣ. ಹೀಗಾಗಿ ಜನ ಕೊರೋನಾ ನಿಯಮಾವಳಿಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ಪ್ರಕರಣಗಳ ಸಂಖ್ಯೆಯಲ್ಲಿನ ಹೊಸ ಏರಿಕೆ ಮತ್ತು ಮುಂಬರುವ ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮುಖ್ಯ” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಪತ್ರದಲ್ಲಿ ಸೂಚಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ 40,953 ಹೊಸ ಕೊರೋನಾ ಪ್ರಕರಣಗಳಿವೆ. ಈ ಸಂಖ್ಯೆ ನವೆಂಬರ್ 29 ರ ನಂತರದ ಗರಿಷ್ಠ ದೈನಂದಿನ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ.

Exit mobile version