ಬಾಲಿವುಡ್ ನ ಒಂದು ಯುಗಾಂತ್ಯ..!

ಬಾಲಿವುಡ್ ನಟ ದಿಲೀಪ್ ಕುಮಾರ್ ನಿಧನದೊಂದಿಗೆ ಬ್ಲ್ಯಾಕ್ ಅಂಡ್ ವೈಟ್ ಕಾಲದ ಕೊನೆಯ ಸ್ಟಾರ್ ನಟ‌ನ ವಿದಾಯವಾಗಿದೆ. ದಕ್ಷಿಣದಲ್ಲಿ ನಮ್ಮ ರಾಜ್ ಕುಮಾರ್, ಮಲಯಾಳಂನ ಪ್ರೇಮ್ ನಸೀರ್, ತಮಿಳಿನ‌ ಎಂಜಿಆರ್, ತೆಲುಗಿನ ಎನ್ ಟಿಆರ್ ಹಾಗೆಯೇ ಹಿಂದಿ‌ ಸಿನಿಮಾಗಳಲ್ಲಿ ಸ್ಟಾರ್ ಆಗಿದ್ದವರು ದಿಲೀಪ್ ಕುಮಾರ್. ಹಾಗಾಗಿ ಅವರ ಸಾವು ಒಂದು‌‌ ಕಾಲಘಟ್ಟದ ಚಿತ್ರರಂಗದ ವೈಭವಕ್ಕೆ ಶಾಶ್ವತ ಪರದೆ ಎಳೆಯಿತು ಎನ್ನಬಹುದು.

ನಿಜವಾದ ಹೆಸರು ಯೂಸುಫ್ ಖಾನ್!

ಹೌದು! ಇಂದು ಬಾಲಿವುಡ್ ನಲ್ಲಿ‌ ಖಾನ್ ತ್ರಯರು ಹೆಸರು ಮಾಡಿರಬಹುದು. ಆದರೆ ಅವರೆಲ್ಲರಿಗಿಂತ ಮೊದಲು ಸದ್ದು ಮಾಡಿದ ಖಾನ್ ಈ ದಿಲೀಪ್ ಕುಮಾರ್. ಇಂದು‌ ಪಾಕಿಸ್ತಾನದ ಪಾಲಾಗಿರುವ ಪೇಶಾವರದಲ್ಲಿ‌ ಜನಿಸಿದ್ದರೂ ಭಾರತೀಯರಾಗಿಯೇ ಉಳಿದವರು ಇವರು. ಅದರಲ್ಲೂ ದಿಲೀಪ್ ಕುಮಾರ್ ಎಂದು ಬದಲಾಯಿಸಲಾದ ಅವರ ಹೆಸರು ಮತ್ತು ಅವರು ಮಾಡುತ್ತಿದ್ದ ದೇಶ‌ಪ್ರೇಮ ಸಾರುವ ಪಾತ್ರಗಳು ಅವರ ಬಗ್ಗೆ ಎಂದಿಗೂ ಪ್ರಶ್ನಿಸುವ ಸಂದರ್ಭ ಸೃಷ್ಟಿಸಿರಲಿಲ್ಲ. ಅಲ್ಲವಾದರೂ ಸರ್ಕಾರವನ್ನು ಪ್ರಶ್ನಿಸಿದರೆ ಅದು ದೇಶದ್ರೋಹ ಎನ್ನುವ ಕಾಲಘಟ್ಟ ಕೂಡ ಅದಾಗಿರಲಿಲ್ಲ. ಇಂದು‌ ಸ್ವಾತಂತ್ರ್ಯ ನಂತರ ಭಾರತದಲ್ಲಿ ಹುಟ್ಟಿದ ‌ನಟರುಗಳೇ ಸರ್ಕಾರದ ವಿರುದ್ಧ ಒಂದು ಮಾತನಾಡಿದರೆ ಅವರನ್ನು ‌ಪಾಕಿಸ್ತಾನಕ್ಕೆ‌ಕಳಿಸುವ ಮಾತುಗಳು ಬರುತ್ತವೆ. ಆದರೆ ದಿಲೀಪ್ ಕುಮಾರ್ ಮಾತ್ರ ಭಾರತೀಯ ಚಿತ್ರರಂಗದ ಆದರ್ಶ ನಾಯಕನಾಗಿಯೇ ಉಳಿದರು. ಹಾಗೊಂದು‌ ಇಮೇಜ್ ನೀಡುವಲ್ಲಿ ಅಂದಾಜ್, ದಾಗ್, ದೇವದಾಸ್, ಆಜಾದ್, ಮುಘಲ್ ಎ ಅಜಾಮ್, ಗಂಗಾ ಜಮುನಾ, ರಾಮ್ ಔರ್ ಶಾಮ್ ಮೊದಲಾದ ಚಿತ್ರಗಳ ಜನಪ್ರಿಯತೆಯೂ ಇತ್ತು.

ದಿಲೀಪ್ ಕುಮಾರ್ ದೇಶಭಕ್ತಿ

ಇಂದು‌ ನಮ್ಮ ದೇಶದಲ್ಲಿ ಮುಸಲ್ಮಾನನಾದವನು ತನ್ನ ದೇಶಭಕ್ತಿಯನ್ನು ಪ್ರದರ್ಶನಕ್ಕೆ ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ ಮೊಹಮ್ಮದ್ ಯೂಸುಫ್ ಖಾನ್ ಕೇವಲ ತಮ್ಮ ಹೆಸರಿನ ಬದಲಾವಣೆಯಿಂದ ಮಾತ್ರ ಭಾರತೀಯ ಎಂದು ಅನಿಸಲಿಲ್ಲ. ಅವರು ಬೆಳೆದ ವಾತಾವರಣವು ಕೂಡ ಅದಕ್ಕೆ ಪೂರಕವಾಗಿತ್ತು ಎಂದೇ ಹೇಳಬಹುದು.

ಉದಾಹರಣೆಗೆ ಅವರ ಬಾಲ್ಯದ ವಿದ್ಯಾಭ್ಯಾಸ ನಡೆದಿದ್ದು ದಿಯೊಲಾಲಿಯ ಬರ್ನ್ಸ್ ಶಾಲೆಯಲ್ಲಿ. ಬಾಲ್ಯದಲ್ಲಿ ಅವರ ಗೆಳೆಯರಾಗಿದ್ದವರು ಮುಂದೆ ಬಾಲಿವುಡ್ ನ ರಾಜನಾಗಿ ಮೆರೆದ ರಾಜ್ ಕಪೂರ್. ಅದೇ ಗೆಳೆಯನಂತೆ ಮತ್ತೊಬ್ಬ ರಾಜನಾಗಿ ಮೆರೆದವರು ದಿಲೀಪ್ ಕುಮಾರ್. ಅಂದಹಾಗೆ ಅದರಲ್ಲಿ ಆ ಗೆಳೆತನದ ಪಾತ್ರಕ್ಕೇನು ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಪುಣೆಯ ಆರ್ಮಿಕ್ಲಬ್ ನಲ್ಲಿ ಸ್ಯಾಂಡ್ ವಿಚ್ ಅಂಗಡಿ ನಡೆಸಿದ ಬದುಕೂ ಅವರದಾಗಿತ್ತು! ಹಣ್ಣಿನ ವ್ಯಾಪಾರಿಯಾದ ತಂದೆಗೆ ಆರ್ಥಿಕ‌ ಸಹಾಯ ಮಾಡಲೆಂದು ಈ‌ ವೃತ್ತಿಗೆ ಅವರು ಕೈ ಹಾಕಿದ್ದರು. ಆದರೆ ಡಾ.ಮಸಲಿ ಎನ್ನುವವರ ಪರಿಚಯದೊಂದಿಗೆ ನಟಿ ದೇವಿಕಾರಾಣಿಯ ಭೇಟಿ ಅವರನಯ ಒಬ್ಬ ನಟನಾಗಿ ಬದಲಾಯಿಸಿತು! ಅವರಿಗೆ ಲೆಜೆಂಡರಿ ಕಿಂಗ್, ಟ್ರಾಜಿಡಿ ಕಿಂಗ್ ಎನ್ನುವ ಬಿರುದಗಳಲ್ಲದೆ ದೇಶ ನೀಡುವ ಶ್ರೇಷ್ಠ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭ್ಯವಾಗಿವೆ.

ವಿವಾದಗಳೂ ಇದ್ದವು

ಹಾಗಂತ ದಿಲೀಪ್ ಕುಮಾರ್ ಅವರಿಗೂ ವಿವಾದಗಳಿಗೆ ಕೊರತೆ ಇರಲಿಲ್ಲ. ತಮಗಿಂತ 22 ವರ್ಷ ಕಿರಿಯ ಸಾಯಿರಾ ಬಾನುವನ್ನು ವಿವಾಹವಾಗಿದ್ದು, ವಿವಾಹಕ್ಕೂ ಮೊದಲು ಮಧುಬಾಲ, ಕಾಮಿನಿ ಕೌಶಲ್, ವೈಜಯಂತಿ ಮಾಲ ಎನ್ನುವ ನಟಿಯರೊಂದಿಗಿನ‌ ಗಾಸಿಪ್ ಗಳಲ್ಲಿ‌ ಹೆಸರು ಕಾಣಿಸಿಕೊಂಡಿದ್ದು ಬಿಟ್ಟರೆ 1993ರಲ್ಲಿ ಪಾಕಿಸ್ತಾನದ ಅತ್ಯುನ್ನತ ನಾಗರಿಕ‌ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಚರ್ಚೆಗೆ ಗ್ರಾಸವಾದ ವಿಚಾರಗಳಾಗಿತ್ತು.

ಯುವನಟರಿಗೂ ಭರವಸೆಯಾಗಿದ್ದರು

ಐದು‌ ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನ ನಡೆಸಿದ ದಿಲೀಪ್ ಕುಮಾರ್ ಬಾಲಿವುಡ್ ಸುವರ್ಣ ಯುಗದ ದ್ಯೋತಕವಾಗಿದ್ದವರು. ಅವರು ಹುಟ್ಟು ಕಲಾವಿದರಾಗಿರಲಿಲ್ಲ. ಕ್ಯಾಮೆರಾ ಮುಂದೆ ನಟಿಸುವುದನ್ನು ಕಲಿತು ಬಳಿಕ ಸಿನಿಮಾದಲ್ಲಿ ಯಶಸ ಪಡೆದರು. ಈ ಬಗ್ಗೆ ಅವರೇ ಹೇಳಿಕೊಂಡಿದ್ದೂ ಇದೆ. “ನಟನೆ ಎನ್ನುವುದು ಕಲಿತು, ಅಧ್ಯಯನ ಮಾಡಿ, ಅಭ್ಯಾಸ ಮಾಡುವುದರಿಂದ ಕೈಗೂಡುತ್ತದೆ” ಎಂದು ತಮ್ಮ ಆತ್ಮಚರಿತ್ರೆ ‘ದಿ ಸಬ್ಸ್ಟೆನ್ಸ್ ಆಂಡ್ ದಿ ಶಾಡೊ’ ನಲ್ಲಿ ಬರೆದಿದ್ದಾರೆ.

ಇಂದು ಮುಂಜಾನೆ ಅಗಲಿಕೆ

ದೀರ್ಘಕಾಲದಿಂದ ಅನಾರೋಗ್ಯದಲ್ಲಿದ್ದ ದಿಲೀಪ್ ಕುಮಾರ್ ಅವರು 1998ರಲ್ಲಿ ನಟಿಸಿದ್ದೇ ಕೊನೆ. ಕಳೆದ ವಾರ ಮುಂಬೈನ ಹಿಂದುಜಾ ಆಸ್ಪತ್ರೆಯ ನಾನ್-ಕೋವಿಡ್ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿತ್ತು. ಡಾ.ಜಲೀಲ್ ಪಾರ್ಕರ್ ನೇತೃತ್ವದ ವೈದ್ಯರ ತಂಡ ದಿಲೀಪ್ ಕುಮಾರ್‌ಗೆ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 7.30ರ ಸುಮಾರಿಗೆ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ದಿಲೀಪ್ ಕುಮಾರ್ ಅವರು ಚಿತ್ರರಂಗದಲ್ಲಿ ಮಾತ್ರವಲ್ಲ ರಾಜ್ಯಸಭಾ ಸದಸ್ಯರಾಗಿ ಎಂಪಿ ಲ್ಯಾಂಡ್ ಫಂಡ್ ಬಳಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ವಿಜಯ ಟೈಮ್ಸ್ ಅವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ.

Exit mobile version