ಫೆಬ್ರವರಿ 26ಕ್ಕೆ ಲಾರಿ ಮುಷ್ಕರ ಮಾಡಲು ತೀರ್ಮಾನಿಸಿದ ಲಾರಿ ಮಾಲಿಕರ ಸಂಘ

ಬೆಂಗಳೂರು, ಫೆ.15:ಜಿಎಸ್‍ಟಿ ವೇ-ಬಿಲ್ ಕ್ರಮ ಖಂಡಿಸಿ ಟ್ರೇಡರ್ಸ್ ಯೂನಿಯನ್ ಫೆಬ್ರವರಿ 26ಕ್ಕೆ ದೇಶಾದ್ಯಂತ ಕರೆ ಕೊಟ್ಟಿರುವ ಬಂದ್‍ಗೆ ಲಾರಿ ಮಾಲೀಕರು ಬೆಂಬಲ ಘೋಷಿಸಿದ್ದು, ಅಂದು ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಲಾರಿ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

ದೇಶಾದ್ಯಂತ 10 ಲಕ್ಷ ಟ್ರೇಡರ್ಸ್‍ಗಳು ಫೆಬ್ರವರಿ 26ರಂದು ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಬಂದ್‍ಗೆ ಬೆಂಬಲ ನೀಡಿ ನಾವು ಲಾರಿ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಮೂಲಗಳಿಗೆ ತಿಳಿಸಿದ್ದಾರೆ.

ಇಂಧನ ದರ ಏರಿಕೆ ಖಂಡಿಸಿ, ಅಂದು ನಾವು ಸಾಂಕೇತಿಕವಾಗಿ ಮುಷ್ಕರ ಮಾಡುತ್ತೇವೆ. ನಂತರ ಮಾರ್ಚ್ 3ರಂದು ಎಲ್ಲ ಸಂಘಟನೆಗಳೊಂದಿಗೆ ಚರ್ಚಿಸಿ ದರ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಫೆ.26ರಂದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಸಂಚಾರ ಸ್ಥಗಿತಗೊಳಿಸಿ, ಟ್ರೇಡರ್ಸ್ ಬಂದ್‍ಗೆ ಬೆಂಬಲ ನೀಡಲಿದ್ದೇವೆ. ಮಾರ್ಚ್ 3ರ ನಂತರ ನಮ್ಮ ಹೋರಾಟದ ಬಗ್ಗೆ ರೂಪು ರೇಷೆ ಸಿದ್ಧಪಡಿಸಲಿದ್ದೇವೆ ಎಂದು ಹೇಳಿದರು.

Exit mobile version