ಚಾಮರಾಜನಗರ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿ ಮತ್ತು ಜನರು ಕಾರಣ ; ಸಚಿವ ಸುರೇಶ್‌ ಕುಮಾರ್‌

ಚಾಮರಾಜನಗರ, ಮೇ. 03; ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ನಡೆದ ಸಾವು ನೋವಿಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜನರು ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ.

ಘಟನೆಯ ಕುರಿತಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳು ಆಕ್ಸಿಜನ್‌ಗಾಗಿ ಮೈಸೂರನ್ನು ಅವಲಂಬಿಸಿದೆ. ಆದರೆ ಮೈಸೂರಿನಿಂದ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಇದ್ದರಿಂದ ಈ ಘಟನೆ ಸಂಭವಿಸಿದೆ ಎಂದರು. ಮೈಸೂರಿನಲ್ಲಿ ನಾಲ್ಕು ಆಕ್ಸಿಜನ್ ಪ್ಲಾಂಟ್‌ ಕೆಲಸ ಮಾಡುತ್ತಿಲ್ಲ. ಅದನ್ನು ಚಾಮರಾಜನಗರಕ್ಕೆ ಕೊಡಿ, ನಾವು ನಡೆಸಿಕೊಂಡು ಹೋಗುತ್ತೇವೆ ಎಂದರು.

ಕೋವಿಡ್‌ ಸೋಂಕಿತರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರಬೇಡಿ. ಈ ಬಗ್ಗೆ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದೇವೆ. ಆದ್ರೆ ಜನರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಬಗ್ಗೆ ಡೆತ್‌ ರಿಪೋರ್ಟ್‌ನಲ್ಲಿ ಮಾಹಿತಿ ಪಡೆದುಕೊಳ್ಳುತ್ತೇನೆ. ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವುದರ ಬದಲು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್ ಎಲ್ಲಾ ಸಾವುಗಳು ಆಕ್ಸಿಜನ್ ಕೊರತೆಯಿಂದ ನಡೆದಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ರಾತ್ರಿ 12.30 ರಿಂದ 2.30 ಗಂಟೆಯ ವರೆಗೆ ಮಾತ್ರ ಆಕ್ಸಿಜನ್ ಕೊರತೆ ಆಗಿದೆ. 24 ಸಾವುಗಳು ಆಮ್ಲಜನಕದ ಕೊರತೆಯಿಂದ ಆಗಿದೆ ಎಂಬುವುದು ಸರಿಯಲ್ಲ. ಈ ನಿಟ್ಟಿನಲ್ಲಿ 24 ಸಾವುಗಳು ಯಾವ ಕಾರಣದಿಂದ ಆಯಿತು ಎಂಬ ಮಾಹಿತಿಯನ್ನು ಕೋರಿದ್ದೇನೆ ಎಂದರು.

ಡೆತ್ ಆಡಿಟ್ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್‌, ಸಿಎಂ ಪ್ರಧಾನ ಕಾರ್ಯದರ್ಶಿ ಹಾಗೂ ಎಡಿಜಿಪಿ ಪ್ರತಾಪ್‌ ರೆಡ್ಡಿ ಗಮನಕ್ಕೂ ತಂದಿದ್ದೇನೆ ಎಂದರು.

ಮಧ್ಯಾಹ್ಮದ ಒಳಗಡೆ ಚಾಮರಾಜನಗರಕ್ಕೆ ಆಕ್ಸಿಜನ್ ಬರಲು ಶಾಸ್ವತ ಸೂತ್ರ ಮಾಡಿಕೊಡಬೇಕು ಎಂಬ ಕೇಳಿದ್ದೇನೆ ಎಂದರು. ಯಾವ ಕಾರಣದಿಂದ ಈ ಸಾವು ಸಂಭವಿಸಿದೆ ಎಂಬ ತನಿಖೆ ನಡೆಸಿದ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತ್ರಿ ಆಗುತ್ತದೆ. ಡೆತ್‌ ಆಡಿಟ್ ವರದಿ ನೋಡಿ ಸೂಕ್ತ ತನಿಖೆಗೆ ಆದೇಶ ಮಾಡಲಾಗುವುದು ಎಂದರು.

Exit mobile version