ವಿಮಾ ತಿದ್ದುಪಡಿ ಕಾಯ್ದೆಗೆ ರಾಜ್ಯ ಸಭೆ ಅನುಮೋದನೆ

ನವದೆಹಲಿ, ಮಾ. 18: ವಿಮಾ ಕ್ಷೇತ್ರದಲ್ಲಿ ಶೇ.74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ವಯ ವಿಮಾ ಕ್ಷೇತ್ರದಲ್ಲಿ ಶೇ.74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ವಿಮಾ ತಿದ್ದುಪಡಿ ಕಾಯ್ದೆಗೆ ರಾಜ್ಯ ಸಭೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದ ವಿಮಾ ಕ್ಷೇತ್ರದ ತಿದ್ದುಪಡಿ ಕಾಯ್ದೆಗೆ ರಾಜ್ಯಸಭೆಯ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಇದುವರೆಗೂ ವಿಮಾ ಕ್ಷೇತ್ರದಲ್ಲಿ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವಿತ್ತು. ಇದರ ಜತೆಗೆ ವಿಮಾ ಸಂಸ್ಥೆಯ ಹೊಣೆಗಾರಿಕೆಯನ್ನು ಭಾರತೀಯರಲ್ಲೇ ಉಳಿಸಿಕೊಳ್ಳಬೇಕು ಎಂಬ ನಿಯಮವಿತ್ತು. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ವಿಮಾ ಕ್ಷೇತ್ರದ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಎರಡನೆ ಬಾರಿಗೆ ಏರಿಕೆ ಮಾಡಲಾಗಿದೆ.

ಮೋದಿ ಸರ್ಕಾರಕ್ಕೂ ಹಿಂದಿನ ಸರ್ಕಾರ ವಿಮಾ ಕ್ಷೇತ್ರದಲ್ಲಿ ಇದ್ದ ಎಫ್‍ಡಿಐ ಪ್ರಮಾಣವನ್ನು ಶೇ.26 ರಿಂದ 49ಕ್ಕೇ ಏರಿಕೆ ಮಾಡಿತ್ತು. ಇದೀಗ ವಿಮಾ ಕ್ಷೇತ್ರದ ತಿದ್ದುಪಡಿ ಕಾಯ್ದೆ-2021 ಜಾರಿಗೆ ಬಂದಿರುವುದರಿಂದ ಇನ್ನು ಮುಂದೆ ಜೀವ ವಿಮಾ ಸೇರಿದಂತೆ ಯಾವುದೇ ವಿಮಾ ಕ್ಷೇತ್ರದಲ್ಲಿ ಶೇ.74 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದಾಗಿದೆ. ಅಂತಹ ಸಂಸ್ಥೆಗಳ ಮಾಲಿಕತ್ವ ಭಾರತೀಯರಲ್ಲೇ ಇರಬೇಕು ಎಂಬ ನಿಯಮಕ್ಕೂ ತೀಲಾಂಜಲಿ ನೀಡಲಾಗಿದೆ. ಆದರೆ, ವಿದೇಶಿ ಸಂಸ್ಥೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳಬಹುದು ಎಂದಷ್ಟೆ ಸೂಚಿಸಲಾಗಿದೆ.

ವಿಮಾ ಕ್ಷೇತ್ರದ ತಿದ್ದುಪಡಿ ಕಾಯ್ದೆಗೆ ಉಭಯ ಸದನಗಳಲ್ಲೂ ಪ್ರತಿಪಕ್ಷಗಳು ಹಾಗೂ ಆರ್‍ಎಸ್‍ಎಸ್‍ನ ಕೆಲವರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಯಾವುದೆ ವಿರೋಧಕ್ಕೂ ಮಣಿಯದ ಕೇಂದ್ರ ಸರ್ಕಾರ ವಿಮಾ ಕ್ಷೇತ್ರದ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡಿರುವುದರಿಂದ ಇನ್ನು ಮುಂದೆ ವಿಮಾ ಸಂಸ್ಥೆಗಳಲ್ಲಿ ವಿದೇಶಿಗರ ಪ್ರಾಬಲ್ಯ ಮೀತಿಮೀರುವುದು ಸಾಮಾನ್ಯವಾಗಲಿದೆ.

Exit mobile version