ಬಜೆಟ್‌ ಮಂಡಿಸುವ ನೈತಿಕತೆ ರಾಜ್ಯ ಸರ್ಕಾರಕ್ಕಿಲ್ಲ: ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು, ಮಾ, 08: ಈ ಭಾರಿಯ ಬಜೆಟ್ ಮಂಡಿಸಲು ಹಾಗೂ ಅಧಿಕಾರದಲ್ಲಿ ಇರಲು ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್ ಮಂಡಿಸುವ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಕೋರ್ಟ್‌ಗೆ ಹೋಗಿರುವ ಆರು ಸಚಿವರ ವಿರುದ್ಧ ಹರಿಹಾಯ್ದರು.

ಕಪ್ಪು ಪಟ್ಟಿ ಧರಿಸಿ ಸದನ ಪ್ರವೇಶ ಮಾಡುತ್ತೇವೆ. ಈ ಬಜೆಟ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಬಜೆಟ್ ಮಂಡನೆ ವೇಳೆ ನಾವು ಸದನವನ್ನು ಬಹಿಷ್ಕರಿಸಿ, ಸಭಾತ್ಯಾಗ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿಯ ಸಭಾತ್ಯಾಗ ನಡೆಯಲಿದೆ.

2011ರಲ್ಲಿ ನಡೆದಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಲಂ ಪಾಷಾ ಎಂಬುವವರಿಗೆ ಹಂಚಿಕೆಯಾಗಿದ್ದ ಭೂಮಿಯಲ್ಲಿ, 26 ಎಕರೆ ಬಡಾವಣೆ ಯೋಜನೆಯಲ್ಲಿ ಡಿನೋಟಿಫೈಗೆ ಸಂಬಂಧಿಸಿದಂತೆ ಅವ್ಯವಹಾರ ಆರೋಪ ಬಂದಿತ್ತು. ಇದರ ವಿರುದ್ಧ ತನಿಖೆ ನಡೆಸುವಂತೆ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರಿಗಿನ್ನೂ ರಿಲೀಫ್ ಸಿಕ್ಕಿಲ್ಲ. ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಿರುವಾಗ ಅವರಿಗೆ ಬಜೆಟ್ ಮಂಡಿಸಲು ನೈತಿಕತೆ ಇಲ್ಲ ಎಂದು ಆರೋಪಿಸಿದರು.

ಜತೆಗೆ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಪ್ರಸ್ತಾಪಿಸಿದ ಸಿದ್ದರಾಮಯ್ಯ, ನ್ಯಾಯಾಲಯದ ಮೆಟ್ಟಿಲೇರಿದ ಆರು ಶಾಸಕರ ವಿರುದ್ಧ ಕಿಡಿಕಾರಿದರು. ಇವರೆಲ್ಲ ಪ್ರಮಾಣವಚನ ಸ್ವೀಕರಿಸಿ ಸಚಿವರಾದವರು. ಈಗ ಭಯ ಇದೆ ಎಂದು ಕೋರ್ಟ್‌ಗೆ ಹೋಗಿದ್ದಾರೆ. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ ಎಂದು ಹೇಳಿದರು.

‘ನಾನು ತಪ್ಪು ಮಾಡಿಲ್ಲ, ಹೀಗಾಗಿ ಕೋರ್ಟ್‌ಗೆ ಹೋಗಿಲ್ಲ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಹಾಗಾದರೆ ಉಳಿದವರು ಏನು ಮಾಡಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು. ಬಜೆಟ್ ಕಲಾಪ ಸಭಾತ್ಯಾಗದ ನಿರ್ಧಾರವನ್ನು ಕೈಬಿಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನವೊಲಿಕೆಗಾಗಿ ಸರ್ಕಾರ ಮುಂದಾಯಿತು. ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ ಅವರು ಸಿದ್ದರಾಮಯ್ಯ ಕೊಠಡಿಗೆ ತೆರಳಿ ಸಂಧಾನ ಪ್ರಯತ್ನ ನಡೆಸಿದರು.

Exit mobile version