ಭಾರತದ ಹೈಕೋರ್ಟ್ ಗಳಲ್ಲಿ ಒಟ್ಟು ಪುರುಷ ಜಡ್ಜ್ ಗಳ ಸಂಖ್ಯೆ 567, ಮಹಿಳೆಯರದ್ದೆಷ್ಟು ಗೊತ್ತಾ?

ಭಾರತದಲ್ಲಿ ಒಟ್ಟು 25 ಹೈಕೋರ್ಟ್ ಗಳಿವೆ. ಇವುಗಳಲ್ಲಿ 1098 ಜಡ್ಜ್ ಹುದ್ದೆಗಳಿದ್ದು, ಇವುಗಳಲ್ಲಿ ೪೫೪ ಖಾಲಿ ಇವೆ. ಭರ್ತಿಯಿರುವ ೬೪೪ ಹುದ್ದೆಗಳಲ್ಲಿ ಪುರುಷರ ಸಂಖ್ಯೆ 567 ಆಗಿದ್ದರೆ ಮಹಿಳೆಯರ ಸಂಖ್ಯೆ ಕೇವಲ 77 ಇದೆ. ಕೇಂದ್ರ ಸರಕಾರ ನೀಡಿರುವ ಮಾಹಿತಿ ಪ್ರಕಾರ ಮಣಿಪುರ, ಮೇಘಾಲಯ, ಪಟ್ನಾ, ತ್ರಿಪುರಾ ಮತ್ತು ಉತ್ತರಾಖಂಡ್ ಹೈಕೋರ್ಟ್‌ಗಳಲ್ಲಿ ಒಬ್ಬರೂ ಮಹಿಳಾ ಜಡ್ಜ್‌ಗಳಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕ ಹೈಕೋರ್ಟ್ ನಲ್ಲೂ 62 ಜಡ್ಜ್ ಹುದ್ದೆಗಳಿದ್ದು, ಇದರಲ್ಲಿ ಪುರುಷರು 41 ಹಾಗೂ ಮಹಿಳೆಯರು ಕೇವಲ 6. ಇಲ್ಲಿಯೂ 15 ಹುದ್ದೆಗಳು ಖಾಲಿಯಿವೆ.

2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಸುಪ್ರೀಂಕೋರ್ಟ್‌ನಲ್ಲಿರುವ ಮೂರು ಮಹಿಳಾ ಜಡ್ಜ್‌ಗಳು ಭಾರತದ ನಾರಿ ಶಕ್ತಿಯ ಪ್ರತೀಕವಾಗಿದ್ದಾರೆ. ಇದರ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕೆಂದು ಹೇಳಿದ್ದರು. ಆದರೆ ಇದೇ ವಿಷಯವನ್ನು ಈಗ ಪ್ರಸ್ತಾಪಿಸಿದರೆ ಕೇವಲ ಒಂದು ಮಹಿಳಾ ಜಡ್ಜ್ ಮಾತ್ರ ಉಳಿದುಕೊಂಡಿದ್ದಾರೆಂದು ಹೇಳಿಕೊಳ್ಳಬೇಕಾಗುತ್ತದೆ. ಅವರು ಜಸ್ಟಿಸ್ ಇಂದಿರಾ ಬ್ಯಾನರ್ಜೀ.

ಈ ರೀತಿ ಮಹಿಳೆಯರ ಸಂಖ್ಯೆ ಕಡಿಮೆಯಿರುವುದಕ್ಕೆ ಮುಖ್ಯವಾಗಿ ಮಹಿಳಾ ಮೀಸಲಾತಿ ಇಲ್ಲದಿರುವುದೇ ಕಾರಣ ಎಂದು ಅಂದಾಜಿಸಲಾಗಿದೆ. ಜೊತೆಗೆ ಕಾರ್ಯಸ್ಥಳಗಳಲ್ಲಿ ಹಿಂಸೆ ಅನುಭವಿಸುವುದೂ ಕಾರಣಗಳಲ್ಲಿ ಸೇರಿಕೊಂಡಿದೆ.

ಈ ಅಸಮತೋಲನವನ್ನು ಹೋಗಲಾಡಿಸಲು ಭಾರತೀಯ ಮಹಿಳಾ ವಕೀಲರ ಆಯೋಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಮೀಸಲಾತಿ ಜೊತೆಗೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಅಗತ್ಯವೂ ಇದೆಯೆಂದು ಆಯೋಗ ಹೇಳಿದೆ.

Exit mobile version