ರಾಜ್ಯದಲ್ಲಿ 18-44 ವಯೋಮಾನದವರಿಗೆ ಸದ್ಯಕ್ಕಿಲ್ಲ ಕೋವಿಡ್‌-19 ಲಸಿಕೆ

ಬೆಂಗಳೂರು, ಮೇ. 24: ರಾಜ್ಯದಲ್ಲಿ ಕೋವಿಡ್‌-19 ಲಸಿಕೆ ಕೊರತೆ ಇದ್ದು, ಸದ್ಯಕ್ಕೆ 18ರಿಂದ 44 ವರ್ಷದವರಿಗೆ ಲಸಿಕೆ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ಈ ವಯೋಮಾನದ ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಶನಿವಾರದಿಂದ ಲಸಿಕೆ ವಿತರಿಸಲು ಸೂಚಿಸಲಾಗಿತ್ತು. ಆದರೆ, ಲಸಿಕೆ ಆಸ್ಪತ್ರೆಗಳಿಗೆ ಸೂಕ್ತ ನಿರ್ದೇಶನ ನೀಡದ ಕಾರಣ ಲಸಿಕೆ ವಿತರಣೆ ಮಾಡಿಲ್ಲ. ರಾಜ್ಯದಲ್ಲಿ ಗುರುತಿಸಿರುವ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಮತ್ತು ಆದ್ಯತೆ ಗುಂಪಿನವರಿಗೆ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಪ್ರಕಟಣೆ ಹೊರಡಿಸಿದ್ದಾರೆ.

‘ಸದ್ಯ 45 ವರ್ಷ ಮೇಲ್ಪಟ್ಟವರಿಗೆ ‘ಕೋವಿಶೀಲ್ಡ್’ ಮೊದಲ ಡೋಸ್ ನೀಡಲಾಗುವುದು. ಅರ್ಹ ಫಲಾನುಭವಿಗಳು ನಗರ ಪ್ರದೇಶಗಳಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಪಡೆಯಬಹುದು ಎರಡನೇ ಡೋಸ್ ಪಡೆಯುವವರು ನೇರವಾಗಿ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version