ಕೇಂದ್ರದ ಬಜೆಟ್ ಜನರ ಶೋಷಣೆಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ: ಹೆಚ್‌ಡಿಕೆ

ಬೆಂಗಳೂರು, ಫೆ. 01: ಕೇಂದ್ರ ಸರ್ಕಾರದ 2021ನೇ ಸಾಲಿನ ಬಜೆಟ್ ಜನರ ಶೋಷಣೆಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಎಲ್ಲವನ್ನೂ ಏರಿಸಿರುವ ಕೇಂದ್ರ ತನ್ನದು ‘ಅತ್ಮನಿರ್ಭರ ಭಾರತ’ ರೂಪಿಸುವ ಬಜೆಟ್‌ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದೆ. ಇಷ್ಟು ಏರಿಕೆಗಳನ್ನು ಕಂಡ ಭಾರತವು ಆತ್ಮನಿರ್ಭರತೆಯನ್ನು ಸಾಧಿಸಲು ಸಾಧ್ಯವೇ? ಡೀಸೆಲ್‌, ಪೆಟ್ರೋಲ್‌ ಈಗಾಗಲೇ ಏರುತ್ತಿದೆ. ಅದರ ಜೊತೆಗೆ ಈಗಿನ ಭಾರಿ ಏರಿಕೆ ಪರಿಣಾಮ ಏನಾಗಲಿದೆ ಎಂದು ಕೇಂದ್ರ ಯೋಚಿಸಿದಂತೆ ಇಲ್ಲ.

ಏರಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಕೃಷಿ ಸೆಸ್‌ ಅನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.ಒಂದೆಡೆ ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಸರ್ಕಾರ ತನ್ನ ರಕ್ಷಣೆಗೆ ಮಾತ್ರ ಕೃಷಿ ಕ್ಷೇತ್ರದ ನೆರವು ಪಡೆದಂತಿದೆ.ಕೃಷಿ ಸೆಸ್‌ನಿಂದ ಸಂಗ್ರಹವಾಗುವ ಹಣವನ್ನು ಕೃಷಿ ರಂಗದ ಅಭಿವೃದ್ದಿಗೆ ಬಳಸಲಾಗುತ್ತದೆಯೇ ಎಂಬುದರ ವಿವರಣೆಯೇ ಬಜೆಟ್‌ನಲ್ಲಿ ಇಲ್ಲ.

2020-21ರಲ್ಲಿ 9.5% ಮತ್ತು 2022ರಲ್ಲಿ 6.8% ವಿತ್ತೀಯ ಕೊರತೆ ಇರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದು ಒಂದು ಅರ್ಥವ್ಯವಸ್ಥೆಯಲ್ಲಿನ ಭೀಕರ ಪರಿಸ್ಥಿತಿಯೇ ಸರಿ. ಈ ಕೊರತೆಯನ್ನು ಸರ್ಕಾರ ಎಲ್ಲಿಂದ ತುಂಬಿಸಿಕೊಳ್ಳುತ್ತದೆ? ಇದರ ಪರಿಹಾರಕ್ಕಾಗಿ ನೋಟು ಪ್ರಿಂಟು ಮಾಡಲು ಆಗುವುದಿಲ್ಲ. ಕಡೆಗೆ ಅದು ಬ್ಯಾಂಕ್‌ಗಳಿಗೆ ಕೈ ಹಾಕುತ್ತದೆ.

ಭಾರಿ ಪ್ರಮಾಣದ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿನ ಸಂಪನ್ಮೂಲವನ್ನು ಅಕ್ಷರಶಃ ದೋಚಲು ಆರಂಭಿಸುತ್ತದೆ. ಇದು ಮತ್ತೊಂದು ಆರ್ಥಿಕ ವಿಷಮ ಪರಿಸ್ಥಿತಿಗೆ ಕಾರಣವಾಗುತ್ತದೆ. ಅದರ ಪರಿಣಾಮ ಸಾಮಾನ್ಯ ಜನರ ಮೇಲೆ ಆಗುತ್ತದೆ. ಜನರ ಶೋಷಣೆಗೆ ಇದು ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ.

15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಗಳು ಶೇ. 41ರಷ್ಟು ತೆರಿಗೆ ಪಾಲು ಹೊಂದಿರುವುದಾಗಿಯೂ, ಅದನ್ನು ಕೇಂದ್ರ ಸರ್ಕಾರ ಒಪ್ಪಿರುವುದಾಗಿಯೂ ವಿತ್ತ ಮಂತ್ರಿ ಹೇಳಿದ್ದಾರೆ. ಆದರೆ, ರಾಜ್ಯಗಳ ಪಾಲನ್ನು ಕೇಂದ್ರ ಸರ್ಕಾರ ಈ ವರೆಗೆ ಸರಿಯಾಗಿ ನೀಡಿಲ್ಲ. ಪಾಲನ್ನು ತೋರಿಸುವುದು, ಪಾಲು ನೀಡದೇ ವಂಚಿಸುವುದು ಕೇಂದ್ರ ಪಾಲಿಸಿಕೊಂಡು ಬಂದ ಪರಿಪಾಠವಾಗಿದೆ.

ಹೋದಲ್ಲಿ, ಬಂದಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುವ ಕೇಂದ್ರ ಸರ್ಕಾರ ಮುಂದಿನ ವರ್ಷ ₹12 ಲಕ್ಷ ಕೋಟಿ ಸಾಲ ಮಾಡುವುದಾಗಿ ಹೇಳಿಕೊಂಡಿದೆ. ಯಾಕೆ ಇಷ್ಟು ದೊಡ್ಡ ಮೊತ್ತದ ಸಾಲ? ಈ ಬಗ್ಗೆ ಸರ್ಕಾರದ ಬಳಿ ವಿವರಣೆಗಳೇನಾದರೂ ಇದೆಯೇ? ಈ ಸಾಲದಿಂದ ಆಗಬಹುದಾದ ಘನವಾದ, ಪ್ರಮುಖವಾದ ಕಾರ್ಯವಾದರೂ ಏನು ಎಂಬುದನ್ನು ಕೇಂದ್ರ ಸರ್ಕಾರ ಹೇಳುತ್ತದೆಯೇ?

Covid ಲಸಿಕೆಗಾಗಿ ₹35 ಸಾವಿರ ಕೋಟಿ ನೀಡುವುದಾಗಿಯೂ, ಬೇಕಿದ್ದರೆ ಇನ್ನಷ್ಟು ನೀಡುವುದಾಗಿಯೂ ಕೇಂದ್ರ ಹೇಳಿದೆ. ಇತರ ದೇಶಗಳಿಗೆ ಲಸಿಕೆ ಕಳುಹಿಸುತ್ತಿರುವುದಾಗಿಯೂ ಹೇಳಿದೆ. ಈ ಎಲ್ಲ ಬಣ್ಣನೆಗಳನ್ನು ಬಿಟ್ಟು ಕೇಂದ್ರ ಸರ್ಕಾರ 130 ಕೋಟಿ ಜನರಿಗೆ ಉಚಿತ ಲಸಿಕೆಯನ್ನು ಖಚಿತ ಮಾಡಬೇಕಿತ್ತು. ಆದರೆ, ಸರ್ಕಾರ ಬಣ್ಣನೆಯಲ್ಲಿ ಮಾತು ಮುಗಿಸಿದೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

Exit mobile version