ಕೊರೋನಾ ಮೂರನೇ ಅಲೆ ಮಕ್ಕಳಿಗೆ ಬೀರುವ ಪ್ರಭಾವದ ಕುರಿತು ಯಾವುದೇ ಪುರಾವೆಗಳಿಲ್ಲ: ಏಮ್ಸ್ ನಿರ್ದೇಶಕ

ನವದೆಹಲಿ, ಮೇ. 25: ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಏಮ್ಸ್ ನಿರ್ದೇಶಕ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಕೋವಿಡ್–19 ಮೂರನೇ ಅಲೆಯು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಮಕ್ಕಳ ಮೇಲೆ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಪರಿಣಾಮ ಬೀರುವುದು ಅಥವಾ ಕೋವಿಡ್–19 ಮುಂದಿನ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಲಿವೆ ಎಂಬುದಕ್ಕೆ ಯಾವುದೇ ಪುರಾವೆಗಳಲ್ಲಿ ಎಂದಿದ್ದಾರೆ.

‘ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ದತ್ತಾಂಶಗಳ ಪ್ರಕಾರ, ಸಾಮಾನ್ಯವಾಗಿ ಮಕ್ಕಳು ಕೊರೊನಾ ವೈರಸ್ ಸೋಂಕು ತಗುಲುವುದರಿಂದ ರಕ್ಷಣೆ ಪಡೆದಿದ್ದಾರೆ. ಅಕಸ್ಮಾತ್ ಮಕ್ಕಳಿಗೆ ಕೋವಿಡ್ ದೃಢಪಟ್ಟರೂ ಅವರಲ್ಲಿ ಅಲ್ಪ ಪ್ರಮಾಣದ ಸೋಂಕು ಮಾತ್ರ ಇರುವುದನ್ನು ಗಮನಿಸಲಾಗಿದೆ’ ಎಂದು ಗುಲೇರಿಯಾ ಹೇಳಿದ್ದಾರೆ.
ಆದರೆ, ಸಾಂಕ್ರಾಮಿಕ ಸಂದರ್ಭದಲ್ಲಿ ಮಕ್ಕಳು ಬೇರೆ ರೀತಿಯ ಪರಿಣಾಮಗಳಿಗೆ ಒಳಗಾಗಿದ್ದಾರೆ. ಅಧಿಕ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳು, ಸ್ಮಾರ್ಟ್ಫೋನ್ಗಳ ಮೇಲೆ ಅತಿಯಾದ ಅವಲಂಬನೆ, ಶಿಕ್ಷಣ ಮತ್ತು ಕಲಿಕೆಯ ಅವಕಾಶಗಳ ಕೊರತೆ ಎದುರಾಗಿದೆ. ಗ್ರಾಮೀಣ ಭಾಗಗಳಲ್ಲಿ ಶಾಲಾ ಮಕ್ಕಳ ಶಿಕ್ಷಣಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ವಿವರಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ದೇಹದೊಳಗೆ ಎಸಿಇ ಎನ್ಜೈಮ್ಗಳ (ಕಿಣ್ವ) ಸಹಕಾರದಿಂದ ಹರಡುತ್ತಿರುವುದಾಗಿ ಊಹಿಸಲಾಗಿದೆ. ಆದರೆ, ವೈರಸ್ ವೃದ್ಧಿಸಲು ಸಹಕಾರ ನೀಡುವ ಎಸಿಇ ಎನ್ಜೈಮ್ಗಳು ವಯಸ್ಕರಿಗಿಂತ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತವೆ. ಹಾಗಾಗಿ, ಮಕ್ಕಳಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಎಂದು ಕಲ್ಪಿಸಿಕೊಳ್ಳಲಾಗಿದೆ ಎಂದು ಗುಲೇರಿಯಾ ತಿಳಿಸಿದ್ದಾರೆ.

‘ಈ ಸಿದ್ಧಾಂತವನ್ನು ಹರಿಯಬಿಟ್ಟಿರುವವರ ಪ್ರಕಾರ, ಈವರೆಗೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮಗಳು ಆಗಿಲ್ಲ. ಹಾಗಾಗಿ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುವ ಸಾಧ್ಯತೆ ಇದೆ. ಆದರೆ, ಮಕ್ಕಳಲ್ಲಿ ಸೋಂಕು ತೀವ್ರವಾಗಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೂ ಕಂಡು ಬಂದಿಲ್ಲ’ ಎಂದಿದ್ದಾರೆ.

Exit mobile version