ಇದು ರಾಘಣ್ಣನ ಹೊಸ’ ಬೆಳಕು’

ಚಿತ್ರದ ಹೆಸರು ಬೆಳಕು. ಡಾ.ರಾಜ್ ಕುಮಾರ್ ಅವರ ‘ಹೊಸ ಬೆಳಕು’ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ನೇತ್ರದಾನದ ಮೂಲಕ ಬೆಳಕು ನೀಡುವ ಕುರಿತಾದ ಚಿತ್ರ. ಹಾಗಾಗಿ ಚಿತ್ರಕ್ಕೆ ‘ಬೆಳಕು’ ಎಂದು ಹೆಸರಿಡಲಾಗಿದೆ.

“ಅಂದಹಾಗೆ ಹೊಸ ಬೆಳಕು ಚಿತ್ರದೊಂದಿಗೆ ಮತ್ತೊಂದು ಸಂಬಂಧ ಕೂಡ ಇದೆ. ಅದೇನೆಂದರೆ ಹೊಸ ಬೆಳಕು ಚಿತ್ರದಲ್ಲಿ ರಾಜ್ ಕುಮಾರ್ ಇದ್ದಾರೆ; ಇದರಲ್ಲಿ ಅವರ ಮಗ ನಾನು ಇದ್ದೀನಿ” ಎಂದು ನಕ್ಕರು ರಾಘವೇಂದ್ರ ರಾಜ್ ಕುಮಾರ್. ಅವರು ಚಿತ್ರೀಕರಣದ ಜಾಗದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮಲ್ಲೇಶ್ವರದ ಶೂಟಿಂಗ್ ತಾಣವಾದ ‘ಮಧು ಮನೆ’ಯಲ್ಲಿ ಚಿತ್ರೀಕರಣ ನಡೆದಿತ್ತು.

“ಕತೆ ಕೇಳಿ ಇದನ್ನು ಸಿನಿಮಾ ಮಾಡಬಹುದು ಎಂದು ಸಂದೇಶ ಕೊಟ್ಟವರೇ ರಾಘಣ್ಣ. ಎರಡು ಶೆಡ್ಯೂಲ್ ಮೂಲಕ ಚಿತ್ರ ಪೂರ್ತಿ ಮಾಡುವ ಯೋಜನೆ ಇದೆ” ಎಂದು ನಿರ್ಮಾಪಕ ಬಿ ಎನ್ ಗಂಗಾಧರ್ ಹೇಳಿದರು. ಇದು ಅವರ ನಿರ್ಮಾಣದ 28ನೇ ಚಿತ್ರ.

ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ಸುಧಾರಾಣಿ‌ ನಟಿಸುತ್ತಿದ್ದಾರೆ. “ನಾನು ರಾಜ್ ಕುಮಾರ್ ಅವರ ಮನೆಯ ಮೂರು ತಲೆಮಾರುಗಳ ಜೊತೆಗೆ ನಟಿಸಿದ್ದೇನೆ. ಆದರೆ ರಾಘಣ್ಣನೊಂದಿಗೆ ನಟಿಸುತ್ತಿರುವುದು ಇದೇ ಮೊದಲು” ಎಂದರು ಸುಧಾರಾಣಿ.

ಯುವ ನಾಯಕಿ ನಿರೀಕ್ಷಾ ಶೆಟ್ಟಿ ಮಾತನಾಡಿ, “ನನಗೆ ಇದು ಮೊದಲ ಕನ್ನಡ ಸಿನಿಮಾ. ಈ ಹಿಂದೆ ‘ಅಪ್ಪೆ ಟೀಚರ್’ ಎನ್ನುವ ತುಳು ಸಿನಿಮಾದಲ್ಲಿ ನಟಿಸಿದ ಅನುಭವ ಇರುವುದಾಗಿ ಅವರು ತಿಳಿಸಿದರು. ಮಾತ್ರವಲ್ಲ, ಆರ್ ಚಂದ್ರು ಅವರ ‘ಕಬ್ಜ’ ಚಿತ್ರದಲ್ಲಿಯೂ ಒಂದು ಸಣ್ಣ ಆದರೆ ಪ್ರಮುಖ ಪಾತ್ರ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡರು.

Exit mobile version