ಟೋಕಿಯೊ ಒಲಿಂಪಿಕ್ಸ್‌: ಗಾಲ್ಫ್‌ನಲ್ಲಿ ಅದಿತಿ ಅಶೋಕ್‌ಗೆ ಕೈತಪ್ಪಿದ ಪದಕ: ಕರ್ನಾಟಕದ ಆಟಗಾರ್ತಿ ಸಾಧನೆಗೆ ರಾಷ್ಟಪತಿ, ಪ್ರಧಾನಿ ಶ್ಲಾಘನೆ

ಟೋಕಿಯೋ, ಆ. 07: ಒಲಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಕರ್ನಾಟಕದ ಅದಿತಿ ಅಶೋಕ್, ಅಂತಿಮವಾಗಿ 4ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

23 ವರ್ಷದ ಅದಿತಿ ಅಶೋಕ್‌‌ ಉತ್ತಮ ಸಾಧನೆ ಪ್ರದರ್ಶಿಸಿದ್ದು, ಕೊನೆಯ ಸುತ್ತಿನ ಅಂತ್ಯಕ್ಕೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮೂರನೇ ಹಂತದವರೆಗೂ ನ್ಯೂಜಿಲ್ಯಾಂಡ್‌ನ ಕೊ ಲಿಡಿಯಾ ಹಾಗೂ ಜಪಾನ್‌ನ ಇನಾಮಿ ಮೊನಿಗೆ ಅದಿತಿ ಅವರು ಪೈಪೋಟಿ ನೀಡುತ್ತಲೇ ಬಂದಿದ್ದರು. ಆದರೆ, ಕೊನೆಯ ಎರಡು ಹೋಲ್‌ಗಳಲ್ಲಿ ನ್ಯೂಜಿಲ್ಯಾಂಡ್‌ನ ಕೊ ಲಿಡಿಯಾ, ಜಪಾನ್‌ನ ಇನಾಮಿ ಮೊನಿ ಮುನ್ನಡೆ ಸಾಧಿಸಿದ್ದಾರೆ. ಹಾಗಾಗಿ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ತಮ್ಮ ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಅದಿತಿ ಅಶೋಕ್, ನಾಲ್ಕನೇ ಸ್ಥಾನ ಗಳಿಸಿರುವುದು ಸಂತಸ ತಂದಿಲ್ಲ ಎಂದು ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಬೇರೆ ಯಾವುದೇ ಟೂರ್ನಿಯಾದರೂ ನಾನು ಖುಷಿಪಡುತ್ತಿದ್ದೆ. ಆದರೆ ಒಲಿಂಪಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಸಂತಸಪಡುವುದು ಕಷ್ಟ ಎಂದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಗಾಲ್ಫ್ ವಿಭಾಗದಲ್ಲಿ ಅದಿತಿ ಅಶೋಕ್ ಅವರಿಗೆ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿತ್ತು. ಐತಿಹಾಸಿಕ ಸಾಧನೆ ಮಾಡಿರುವ ಆದಿತಿ, ಒಲಿಂಪಿಕ್ಸ್ ಗಾಲ್ಫ್‌ ಇತಿಹಾಸದಲ್ಲೇ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಗಾಲ್ಫರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಇನ್ನು ಅದಿತಿ ಅಶೋಕ್ ಅವರ‌ ಸಾಧನೆಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶ್ಲಾಘಿಸಿದ್ದು, ಭಾರತದ ಮತ್ತೋರ್ವ ಹೆಣ್ಣುಮಗಳು ಒಲಿಂಪಿಕ್‌ನಲ್ಲಿ ಉತ್ತಮ ಪ್ರದರ್ಶನ ಸಾಧಿಸಿದ್ದಾರೆ. ಭಾರತದ ಗಾಲ್ಫ್‌‌‌ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಅದಿತಿ, ಉತ್ತಮ ಪ್ರದರ್ಶನ ತೋರುತ್ತಲೇ ಇದ್ದರು ಎಂದು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕರ್ನಾಟಕದ ಯುವ ಆಟಗಾರ್ತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದಿತಿಯವರೇ ನೀವು ಗಾಲ್ಫ್‌ ಆಟದಲ್ಲಿ ಉತ್ತಮವಾದ ಪ್ರದರ್ಶನ ನೀಡಿದ್ದೀರಿ. ಆಕಸ್ಮಿಕವಾಗಿ ಪ್ರಶಸ್ತಿ ಕೈತಪ್ಪಿ ಹೋಗಿದೆ. ಆದರೆ, ನೀವು ಈವರೆಗೆ ಯಾವ ಭಾರತೀಯರೂ ಮಾಡದ ಸಾಧನೆಗೈದದ್ದೀರಿ. ಭವಿಷ್ಯದ ನಿಮ್ಮ ಅಭಿಯಾನಕ್ಕೆ ಶುಭಾಶಯಗಳು ಎಂದಿದ್ದಾರೆ.

Exit mobile version