100 ದಾಟಿದ ಟೊಮೆಟೊ ದರ

ಬೆಂಗಳೂರು ನ 23 : ಮಳೆ ಮನೆಯಿಂದ ನಿರಂತರವಾಗಿ ಏರಿಕೆ ಕಂಡಿರುವ ಟೊಮೆಟೊ ದರ ಸೋಮವಾರ ಶತಕ ದಾಟಿದೆ, ಸಗಟು, ಚಿಲ್ಲರೆ ಹಾಗೂ ಹಾಪ್‌ಕಾಮ್ಸ್‌ನಲ್ಲೂ ಟೊಮೆಟೊ ಕೆ.ಜಿಗೆ 100 ಹಾಗೂ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ತರಕಾರಿಗಳ ದರ 15 ದಿನಗಳಿಂದ ಏರಿಕೆ ಕಂಡಿವೆ. ಎರಡು ದಿನಗಳ ಹಿಂದೆ ಟೊಮೆಟೊ ದರ 70ರಷ್ಟಿತ್ತು. ಸೋಮವಾರದ ವೇಳೆಗೆ ದರ ದಿಢೀರ್‌ ಏಂದು, ಚಿಲ್ಲರೆ ಮಳಿಗೆಗಳಲ್ಲಿ ಕೆ.ಜಿ.ಗೆ 150ರಂತೆ ಮಾರಾಟವಾಗಿದೆ. ಹಾಪ್‌ಕಾಮ್ಸ್‌ನಲ್ಲೂ ಟೊಮಟೊ ದರ 100ಕ್ಕೆ ಏರಿದೆ.

‘ಕಳೆದ ವಾರದಿಂದ ಟೊಮೆಟೊ ದರ ಏರುತ್ತಿದ್ದು, ಈ ಹೆಚ್ಚಳ ಮುಂದುವರಿದಿದೆ. ಗುಣಮಟ್ಟದ ಹಣ್ಣುಗಳ ಸಗಟು ದರವು ಸೋಮವಾರ ಪ್ರತಿ ಕೆ.ಜಿಗೆ 100ರವರೆಗೆ ತಲುಪಿದೆ’ ಎಂದು ಯಶವಂತಪುರ ಎಪಿಎಂಸಿ ಪ್ರಾಂಗಣದ ಕೆಂಪೇಗೌಡ ತರಕಾರಿ ಮಾರುಕಟ್ಟೆಯ ಅಧ್ಯಕ್ಷ ಗೋವಿಂದಪ್ಪ ಮಾಹಿತಿ ನೀಡಿದರು.

ಎಲ್ಲ ತರಕಾರಿ ದರಗಳು ಗಣನೀಯವಾಗಿ ಏರುತ್ತಿವೆ. 10ರಷ್ಟಿದ್ದ ಬದನೆಕಾಯಿ ದರ 70ಕ್ಕೇರಿದ ಸೊಪ್ಪಿನ ದರಗಳೂ ಗಗನಮುಖಿಯಾಗಿವೆ. ಧಾರಾಕಾರ ಮಳೆಯಿಂದ ಮಾರುಕಟ್ಟೆಗಳಲ್ಲಿ ತರಕಾರಿಗಳ ಅಭಾವ ಸೃಷ್ಟಿಯಾಗಿದೆ. ಇದರಿಂದಲೇ ದರ ದುಪ್ಪಟ್ಟಾಗುತ್ತಿದೆ. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿದೆ. ಮಳೆ ಮುಂದುವರಿದರೆ ತರಕಾರಿಗಳ ದರ ತಗ್ಗಲು ತಿಂಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು’ ಎಂದರು.

Exit mobile version