ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ; 30 ಮಂದಿ ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಕಿಸ್ತಾನ, ಜೂ. 07: ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಸುಮಾರು 30 ಮಂದಿ ದುರಂತ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್​ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾಚಿಯಿಂದ ಸರ್ಗೋಡಕ್ಕೆ ತೆರಳುತ್ತಿದ್ದ ಮಿಲ್ಲತ್​ ಎಕ್ಸ್​ಪ್ರೆಸ್​​ ರೈಲು ಹಳಿ ತಪ್ಪಿದ ಪರಿಣಾಮ ಈ ದುರಂತ ಸಂಭವಿಸಿದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸರ್ ಸೈಯದ್​ ಎಕ್ಸ್​​ಪ್ರೆಸ್​​ ರೈಲಿಗೆ ಮಿಲ್ಲತ್​ ಎಕ್ಸ್​​ಪ್ರೆಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಮಿಲ್ಲತ್​ ಎಕ್ಸ್​​ಪ್ರೆಸ್​​ನ ಬೋಗಿಗಳು ಉರುಳಿ ಬಿದ್ದಿವೆ. ಸರ್ ಸೈಯ್​ ಎಕ್ಸ್​​ಪ್ರೆಸ್​​ ರೈಲು ಲಾಹೋರ್​ನಿಂದ ಕರಾಚಿಗೆ ಹೊರಟಿತ್ತು ಎಂದು ತಿಳಿದು ಬಂದಿದೆ. ಸಿಂಧ್​ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ನಗರದಲ್ಲಿ ಈ ಪ್ರಮುಖ ದುರಂತ ನಡೆದಿದೆ. ಘೋಟ್ಕಿ, ಧರ್ಕಿ, ಒಬಾರೋ ಮತ್ತು ಮಿರ್ಪುರ್ ಮಥೆಲೋ ಆಸ್ಪತ್ರೆಗಳಲ್ಲಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದೆ.

ಈ ಅಪಘಾತದಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘೋಟ್ಕಿಯ ಜಿಲ್ಲಾಧಿಕಾರಿ ಉಸ್ಮಾನ್​ ಅಬ್ದುಲ್ಲಾ ತಿಳಿಸಿದ್ದಾರೆ. ಉರುಳಿ ಬಿದ್ದ ಬೋಗಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 13 ರಿಂದ 14 ಬೋಗಿಗಳು ಹಳಿತಪ್ಪಿದ್ದು, ಅವುಗಳಲ್ಲಿ 6-8 ಬೋಗಿಗಳು ಸಂಪೂರ್ಣ ನಾಶವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿದ್ದು, ಬೋಗಿಗಳ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಬೇಕಿದೆ. ಹೀಗಾಗಿ ಅವರನ್ನು ಹೊರತೆಗೆದು ಕಾಪಾಡಲು ತುಂಬಾ ಸಮಯ ಹಿಡಿಯುತ್ತೆ. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಮೆಡಿಕಲ್​ ಕ್ಯಾಂಪ್​ಗಳನ್ನು ಆಯೋಜಿಸುತ್ತಿದ್ದೇವೆ ಎಂದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Exit mobile version