Bengaluru: ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಭಾಷೆಯಾಗಿರುವ ತುಳು ಇದೀಗ ಗೂಗಲ್ ಟ್ರಾನ್ಸ್ಲೇಷನ್ನಲ್ಲಿ (Google Translation) ಲಭ್ಯವಾಗಿದೆ. ಜಗತ್ತಿನ ವಿವಿಧ ದೇಶಗಳ 110 ಹೊಸ ಭಾಷೆಗಳಲ್ಲಿ ಅನುದಾನ ಮಾಡಿಕೊಳ್ಳಲು ಗೂಗಲ್ ಅವಕಾಶ ಮಾಡಿಕೊಟ್ಟಿದೆ. ಈ ಸಾಲಿನಲ್ಲಿ ತುಳು ಭಾಷೆಗೂ ಅವಕಾಶ ಸಿಕ್ಕಿದೆ. ಇದಕ್ಕೂ ಮುನ್ನ ಜಗತ್ತಿನ 133 ಭಾಷೆಗಳಿಗೆ ಮಾತ್ರ ಗೂಗಲ್ ಟ್ರಾನ್ಸ್ಲೇಷನ್ ಅವಕಾಶ ಮಾಡಿಕೊಟ್ಟಿತ್ತು.
![Google Translation](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/maxresdefault-1024x576.jpg)
ಇನ್ನು ಗೂಗಲ್ ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟ್ನಲ್ಲಿ ಈ ಕುರಿತು ಅಧಿಕೃತವಾದ ಮಾಹಿತಿಯನ್ನು ನೀಡಿದೆ. ಈ ಹೊಸ ಭಾಷೆಗಳನ್ನು ಜಗತ್ತಿನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ಜನರು ಮಾತನಾಡುತ್ತಾರೆ. ಜನಸಂಖ್ಯೆಯ ಸುಮಾರು 8 ಪ್ರತಿಶತದಷ್ಟು ಜನರು ದಿನನಿತ್ಯ ಈ ಭಾಷೆಗಳನ್ನು ಮಾತನಾಡುತ್ತಾರೆ. ಹೀಗಾಗಿಯೇ ಗೂಗಲ್ ಅನುವಾದಕ್ಕೆ 110 ಹೊಸ ಭಾಷೆಗಳಿಗೆ ಬೆಂಬಲವನ್ನು ವಿಸ್ತರಿಸುತ್ತಿದೆ ಎಂದು ಗೂಗಲ್ ಕಂಪನಿ (Google Company) ಘೋಷಣೆ ಮಾಡಿದೆ.
ಇನ್ನು ಅರ್ಟಿಫಿಶೀಯಲ್ ಇಂಟೆಲಿಜೆನ್ಸಿ (Artificial Intelligence) ಹೊಸ ಭಾಷೆಗಳ ಅನುವಾದಕ್ಕೆ ನೆರವಾಗಿದೆ. ಈ ಮೂಲಕ ಅರ್ಟಿಫಿಶೀಯಲ್ ಇಂಟೆಲಿಜೆನ್ಸಿಯು ಜಗತ್ತಿನ ವಿವಿಧ ಭಾಷೆಯ ಉಳಿವಿಗೆ ಸಹಕಾರ ನೀಡಿದೆ ಎಂದು ಗೂಗಲ್ ಸಂಸ್ಥೆ ಮಾಹಿತಿ ನೀಡಿದೆ. ಗೂಗಲ್ ಟ್ರಾನ್ಸ್ಲೇಷನ್ನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ 110 ಭಾಷೆಗಳಲ್ಲಿ ಸುಮಾರು ಕಾಲು ಭಾಗದಷ್ಟು ಭಾಷೆಗಳು ಆಫ್ರಿಕನ್ (African) ಭಾಷೆಗಳಾಗಿವೆ.
ತುಳು ಭಾಷೆಗೆ ಕನ್ನಡ ಲಿಪಿ: ತುಳು ಭಾಷೆಗೆ ಲಿಪಿ ಇದ್ದರೂ ಕೂಡಾ ಅದನ್ನು ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತಿದೆ. ತುಳು ಭಾಷೆಯ ಲಿಪಿಯನ್ನು ಗೂಗಲ್ ಪರಿಗಣಿಸಿಲ್ಲ. ಆದರೂ ಕನ್ನಡ ಭಾಷೆಯ ಜೊತೆಗೆ ಗೂಗಲ್ನಲ್ಲಿ ತುಳು ಭಾಷೆ ಸಿಗುತ್ತಿರುವುದು ಬಹಳ ಸಂತಸ ತಂದಿದೆ. ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ತುಳು ಭಾಷೆ (Tulu Language) ಲಭ್ಯವಾಗಿರುವುದು ತುಳು ಭಾಷೆಗೆ ಜಾಗತಿಕ ಮಟ್ಟದಲ್ಲಿ ಸಂದ ವಿಶೇಷ ಗೌರವವಾಗಿದೆ. ತುಳುವರು ಸಂಭ್ರಮಪಡುವ ವಿಚಾರವಾಗಿದೆ ಎಂದು ತುಳು ಭಾಷೆ ಹೋರಾಟಗಾರ ಸದಾಶಿವ ಮುದ್ರಾಡಿ ಹೇಳಿದ್ದಾರೆ.