ಹೇಮಾವತಿ ನದಿ ನೀರಿಗಾಗಿ ತುಮಕೂರು- ರಾಮನಗರ ಕಿತ್ತಾಟ: ಇಂದು ತುಮಕೂರು ಬಂದ್‌!

Tumakuru: ಕಲ್ಪತರು ಜಿಲ್ಲೆಯ ಜೀವನಾಡಿ ಹೇಮಾವತಿ ನದಿಯ ನೀರನ್ನು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಲ್‌ (Hemavati Express Canal) ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತ ನೀರಾವರಿಗೆ ಬಳಸಿಕೊಳ್ಳಲು ತುಮಕೂರಲ್ಲಿ ವ್ಯಕ್ತವಾಗಿರುವ ವಿರೋಧ ತೀವ್ರಗೊಂಡಿದೆ. ಹೀಗಾಗಿ ನೀರಾವರಿ ಹೋರಾಟ ಸಮಿತಿ ಇಂದು ಜಿಲ್ಲಾ ಬಂದ್‌ ಕರೆ ನೀಡಿದ್ದು, ಹತ್ತಾರು ಸಂಘಟನೆಗಳು ಬಂದ್‌ಗೆ (Bandh) ಬೆಂಬಲ ಸೂಚಿಸಿವೆ.

Gorur Dam

ಇಂದಿನ ಬಂದ್‌ಗೆ ವಿವಿಧ ರೈತಪರ, ಕನ್ನಡಪರ ಸಂಘಟನೆಗಳು, ಮಠಾಧೀಶರು, ವರ್ತಕರು, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್ (Hotel Association) ಸೇರಿ ಹಲವು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ನಗರದ ಟೌನ್‌ಹಾಲ್‌ (Townhall)ನಿಂದ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಹೇಮಾವತಿ ನದಿಯ ಗೊರೂರು ಡ್ಯಾಮ್ (Gorur Dam)ನೀರಿಗಾಗಿ ತುಮಕೂರು ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ನಡುವೆ ಕಿತ್ತಾಟ ಶುರುವಾಗಿದೆ. ಕೆನಾಲ್‌ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತನೀರಾವರಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಮೂವತ್ತು ವರ್ಷದ ಹಿಂದೆ ಹೇಮಾವತಿ ನೀರು ತರಲು ನಡೆಸಿದ ತೀವ್ರ ಹೋರಾಟದ ಮಾದರಿಯಲ್ಲೇ ಈಗ ನೀರು ಉಳಿಸಿಕೊಳ್ಳಲು ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ತುಮಕೂರು (Tumakuru) ನಗರ ಸೇರಿದಂತೆ 10 ತಾಲೂಕುಗಳಲ್ಲಿ ಬಂದ್‌ಗೆ ಸಿದ್ಧತೆ ಮಾಡಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ.ಸಭೆಯಲ್ಲಿ ಬಿಜೆಪಿ-ಜೆಡಿಎಸ್ (BJP-JDS) ಮುಖಂಡರು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು. ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ‌ ನೀಡುವಂತೆ ಸಮಿತಿ ಮನವಿ ಮಾಡಿದೆ.

Exit mobile version