ದಯವಿಟ್ಟು ಅನುಮತಿ ಕೊಡಿ ; ಮುಸ್ಲಿಂ ವ್ಯಾಪಾರಿಗಳ ಅಳಲು!

udupi

ನಾವು ಹಿಂದೂ ಧರ್ಮವನ್ನು ಗೌರವಿಸುತ್ತೇವೆ. ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಕಳೆದ ಅನೇಕ ವರ್ಷಗಳಿಂದ ಹಿಂದೂಗಳ ನಂಬಿಕೆಗೆ ಭಂಗ ಉಂಟುಮಾಡದೇ, ಹಿಂದೂ ಧಾರ್ಮಿಕ ಉತ್ಸವಗಳಲ್ಲಿ ಮತ್ತು ಜಾತ್ರೆಗಳಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಈಗ ನಮಗೆ ವ್ಯಾಪಾರ ಮಾಡಲು ಅನುಮತಿ ನಿರಾಕರಿಸಲಾಗುತ್ತಿದೆ. ದಯವಿಟ್ಟು ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಿ ಎಂದು ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರಿಫ್ ವಿನಂತಿ ಮಾಡಿಕೊಂಡಿದ್ದಾರೆ.

ಹಿಜಾಬ್ ವಿವಾದದ ಬಗ್ಗೆ ತೀರ್ಪು ಬಂದ ನಂತರ ಅದನ್ನು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಒಂದು ದಿನದ ಬಂದ್‍ಗೆ ಕರೆ ನೀಡಿದ್ದವು. ಆದರೆ ನಾವು ಯಾವುದೇ ಬಂದ್‍ಗೆ ಬೆಂಬಲ ನೀಡಿಲ್ಲ. ಬಂದ್‍ಗೆ ಬೆಂಬಲಿಸುವಂತೆ ನಮಗೆ ಪತ್ರ ಬಂದಿತ್ತು. ಆದರೆ ನಾವು ಬೆಂಬಲ ನೀಡಲಿಲ್ಲ. ಕೆಲ ಮುಸ್ಲಿಂ ವ್ಯಾಪಾರಿಗಳು ಬಂದ್‍ಗೆ ಬೆಂಬಲ ನೀಡಿರುವುದರಿಂದ ಅಸಮಾಧಾನಗೊಂಡಿರುವ ಹಿಂದೂ ಸಮಾಜ ನಮಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡುತ್ತಿಲ್ಲ.

ನಾವು ಸುಮಾರು 1500 ಜನರು ಬೀದಿಬದಿ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮನ್ನು ನಂಬಿ 650ಕ್ಕೂ ಹೆಚ್ಚು ಕುಟುಂಬಗಳಿವೆ. ನಮ್ಮೆಲ್ಲರ ಕುಟುಂಬಗಳ ಪರಿಸ್ಥಿತಿ ಈಗ ಅತಂತ್ರವಾಗಿದೆ ಎಂದು ತಮ್ಮ ಅಳಲು ತೊಡಿಕೊಂಡರು. ಹಿಜಾಬ್‍ಗೆ ಬೆಂಬಲ ಸೂಚಿಸಿ ಬಂದ್ ಮಾಡುವಂತೆ ನಮಗೆ ಸೂಚನೆ ನೀಡಿದ್ದರು ನಾವು ಎಂದಿನಂತೆ ವ್ಯಾಪಾರ ಮುಂದುವರೆಸಿದ್ದೇವು. ಕೆಲ ಸಂಘಟನೆಗಳು ಮಾಡಿದ ತಪ್ಪಿಗೆ ಈಗ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ಕೊರೊನಾ ಸಮಯದಲ್ಲೇ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ.

ಈಗ ಜಾತ್ರೆ-ಉತ್ಸವಗಳಲ್ಲಿ ನಮಗೆ ನಿರ್ಬಂಧ ವಿಧಿಸಿದರೆ ನಮ್ಮ ಬದುಕು ನಾಶವಾಗುತ್ತದೆ. ಹೀಗಾಗಿ ದಯವಿಟ್ಟು ನಮಗೆ ಅನುಮತಿ ನೀಡಬೇಕು. ಈಗಾಗಲೇ ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹಿಂದೂ ಧಾರ್ಮಿಕ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ನಮಗೆ ನಿರಾಕರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಇದನ್ನ ಇಲ್ಲಿಗೆ ನಿಲ್ಲಿಸಿ, ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಿ ಎಂದು ಆರೀಫ್ ವಿನಂತಿ ಮಾಡಿಕೊಂಡರು.

Exit mobile version