ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಆನ್ಲೈನ್ ಕೋರ್ಸ್ ಆರಂಭಿಸಲು ಅನುಮತಿ ನೀಡಿದ ಯುಜಿಸಿ

New Delhi: ವಿಶ್ವವಿದ್ಯಾಲಯಗಳು ಹೊಂದಿರುವ ಮಾನ್ಯತೆ ಮತ್ತು ಅಂಕಶ್ರೇಣಿಯ ಆಧಾರದ ಮೇಲೆ ಕರ್ನಾಟಕದ (Karnataka) 9 ವಿಶ್ವವಿದ್ಯಾಲಯಗಳಿಗೆ ಆನ್ಲೈನ್ ಕೋರ್ಸ್ ಪ್ರಾರಂಭಿಸಲು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು (ಯುಜಿಸಿ) ಅನುಮತಿ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು (ಯುಜಿಸಿ) ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ವಿಶ್ವವಿದ್ಯಾಲಯಗಳಿಗೆ ಸಹಾಯವಾಗುತ್ತದೆ. ವಿವಿಗಳು ಆರ್ಥಿಕವಾಗಿಯೂ ಸದೃಢವಾಗುತ್ತವೆ. ಜೊತೆಗೆ ಉನ್ನತ ಶಿಕ್ಷಣದ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದೆ.

ಯುಜಿಸಿ (UGC) ಪ್ರಕಾರ, ಆನ್ಲೈನ್ ಕೋರ್ಸ್ ಆರಂಭಿಸಲು ಅರ್ಹತೆ ಹೊಂದಿರುವ ವಿಶ್ವವಿದ್ಯಾಲಯಗಳು ಈ ವರ್ಷದಿಂದಲೇ ಆನ್ಲೈನ್ ಕೋರ್ಸ್ಗಳನ್ನು (Online Course) ಆರಂಭಿಸಬಹುದು. ರಾಜ್ಯದ 5 ವಿವಿಗಳು ಮತ್ತು 4 ಡೀಮ್ಡ್ ವಿಶ್ವವಿದ್ಯಾಲಯಗಳು ಆನ್ಲೈನ್ ಶಿಕ್ಷಣ ಆರಂಭಿಸಬಹುದಾಗಿದ್ದು, ರಾಜ್ಯದ ಏಕೈಕ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೂ ಇದೇ ಮೊದಲ ಬಾರಿಗೆ ಅನುಮತಿ ದೊರೆತಿದೆ.

ಯುಜಿಸಿ ನಿಯಮದ ಪ್ರಕಾರ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ನಿಂದ ಉತ್ತಮ ಶ್ರೇಣಿ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ (National Institutional Ranking) ಫ್ರೇಮ್ವರ್ಕ್ 1 ರಿಂದ 100 ರೊಳಗೆ ರ್ಯಾಂಕ್ ಪಡೆದಿರುವ ವಿಶ್ವವಿದ್ಯಾಲಯಗಳು ಮಾತ್ರವೇ ಈ ಆನ್ಲೈನ್ ಕೋರ್ಸ್ಗಳನ್ನು ಪ್ರಾರಂಭಿಸಬಹುದಾಗಿದೆ. ಹೀಗಾಗಿ ರಾಜ್ಯದ 9 ವಿವಿಗಳು ಈ ನಿಯಮದಡಿ ಆನ್ಲೈನ್ ಕೋರ್ಸ್ ಆರಂಭಿಸುವ ಅರ್ಹತೆ ಪಡೆದಿವೆ. ಇನ್ನು ಪ್ರತಿ ವಿವಿಗಳಿಗೆ ಯಾವೆಲ್ಲ ಕೋರ್ಸ್ಗಳನ್ನು ಬೋಧಿಸಬಹುದು ಎಂದು ಸ್ಪಷ್ಟವಾಗಿ ಯುಜಿಸಿ ತಿಳಿಸಿದೆ. ಅದರ ಪ್ರಕಾರವೇ ವಿವಿಗಳು ಕೋರ್ಸ್ಗಳನ್ನು ಆರಂಭಿಸಬೇಕಾಗುತ್ತದೆ.

ಆನ್ಲೈನ್ ಕೋರ್ಸ್ ಆರಂಭಿಸಲು ಅರ್ಹತೆ ಹೊಂದಿರುವ ರಾಜ್ಯದ 9 ವಿಶ್ವವಿದ್ಯಾಲಯಗಳ ಪಟ್ಟಿ :

  1. ಕುವೆಂಪು ವಿಶ್ವವಿದ್ಯಾಲಯ
  2. ಮೈಸೂರು ವಿಶ್ವವಿದ್ಯಾಲಯ
  3. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
  4. ಬೆಂಗಳೂರು ವಿಶ್ವವಿದ್ಯಾಲಯ
  5. ಜೈನ್ ವಿಶ್ವವಿದ್ಯಾಲಯ
  6. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್
  7. ಯನೆಪೋಯ ವಿವಿ
  8. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
  9. ಜೆಎಸ್ಎಸ್ ಅಕಾಡೆಮಿ ಆಫ್ ಎಜುಕೇಷನ್ ಅಂಡ್ ರಿಸರ್ಚ್

ಮಹೇಶ್

Exit mobile version