124 ಸಿಖ್ ರೆಜಿಮೆಂಟ್​ನಲ್ಲಿ ಕ್ಯಾಪ್ಟನ್ ಆಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪದೋನ್ನತಿ

ದೆಹಲಿ, ಮಾ. 11: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ನೂತನ ಅಭಿದಾನಕ್ಕೆ ಪಾತ್ರರಾಗಿದ್ದು, ಸಚಿವ ಮತ್ತು ಸಂಸದರಾಗಿದ್ದಾಗಲೇ ಭೂಸೇನೆಯಲ್ಲಿ ಗೌರವ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಹಮಿರ್ಪುರ್ ಕ್ಷೇತ್ರದ ಸಂಸದ ಅನುರಾಗ್ ಠಾಕೂರ್ ಅವರು ಇದೀಗ 124 ಸಿಖ್ ರೆಜಿಮೆಂಟ್​ನಲ್ಲಿ ಕ್ಯಾಪ್ಟನ್ ಗೌರವಕ್ಕೆ ಪಾತ್ರವಾಗಿದ್ದಾರೆ. 2016ರ ಜೂನ್​ನಿಂದಲೇ ಗೌರವ ಲೆಫ್ಟಿನೆಂಟ್ ಹುದ್ದೆ ನಿರ್ವಹಿಸುತ್ತಿದ್ದ ಅವರು ಇದೀಗ ಪದೋನ್ನತಿ ಹೊಂದಿದ್ದಾರೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ‘ಲೆಫ್ಟಿನೆಂಟ್ ಪದವಿಯಿಂದ ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದುತ್ತಿರುವುದು ಖುಷಿಯ ವಿಚಾರ. ಮಾತೃಭೂಮಿಗೆ ಸೇವೆ ಸಲ್ಲಿಸಲು ಸೈನ್ಯದಲ್ಲಿ ಇನ್ನೂ ಹೆಚ್ಚಿನ ಅವಕಾಶ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ದೇಶದ ಕುರಿತು ನನ್ನ ಅಭಿಮಾನ ಮತ್ತು ಸೇವಾ ಮನೋಭಾವವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

ಈಗಾಗಲೇ ಕ್ಯಾಪ್ಟನ್ ಆಗಿ ಹುದ್ದೆ ಅಲಂಕರಿಸಿರುವ ಸಂಸದ ಅನುರಾಗ್ ಠಾಕೂರ್, ಸಂಸತ್​ ಸದಸ್ಯನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಅಲ್ಲದೆ ಸೇನೆ ಬಯಸಿದಾಗ ಯಾವುದೇ ಕ್ಷಣ ಸೇವೆ ಸಲ್ಲಿಸಲೂ ಸಿದ್ಧ ಎಂದು ತಿಳಿಸಿದ್ದಾರೆ.

Exit mobile version