ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಿಗೆ ಅ.1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: ಯುಜಿಸಿ

ನವದೆಹಲಿ, ಜು. 17: ದೇಶದಾದ್ಯಂತ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಆಕ್ಟೋಬರ್‌ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಯುಜಿಸಿ ತಿಳಿಸಿದೆ. ಇದರ ಜೊತೆಗೆ ಸೆಪ್ಟೆಂಬರ್‌ 30ರೊಳಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಯೋಗ ಸೂಚಿಸಿದೆ.

ಕೇಂದ್ರೀಯ ಪೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ), ಐಸಿಎಸ್ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳು ಫಲಿತಾಂಶ ಪ್ರಕಟಿಸಿದ ನಂತರವೇ ಪದವಿ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುವಂತೆ ಯುಜಿಸಿ ಸೂಚಿಸಿದೆ.

ಹೊಸ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿರುವ ಯುಜಿಸಿ, ಎಲ್ಲಾ ಶಾಲಾ ಮಂಡಳಿಗಳು ಜುಲೈ 31 ರೊಳಗೆ 12ನೇ ತರಗತಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಒಂದು ವೇಳೆ ಅರ್ಹತಾ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾದರೆ, ಹೊಸ ಶೈಕ್ಷಣಿಕ ವರ್ಷ ಅಕ್ಟೋಬರ್ 18ರಿಂದ ಆರಂಭಿಸಲಾಗುವುದು ಎಂದು ತಿಳಿಸಿದೆ.

ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯು ಆಫ್‌ಲೈನ್, ಆನ್‌ಲೈನ್ ಅಥವಾ ಸಂಯೋಜಿತ ಕ್ರಮದಲ್ಲಿ ಮುಂದುವರಿಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ನೀಡುವ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು, ಅಕ್ಟೋಬರ್ 1ರಿಂದ ಮುಂದಿನ ವರ್ಷದ ಜುಲೈ31ರವರೆಗೆ ತರಗತಿ, ಪರೀಕ್ಷೆ, ಸೆಮಿಸ್ಟರ್‌ ಮತ್ತಿತರ ಯೋಜನೆಗಳನ್ನು ರೂಪಿಸಬಹುದು ಎಂದು ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿದೆ.

ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಪದವಿಯ ಅಂತಿಮ ವರ್ಷ ಅಥವಾ ಅಂತಿಮ ಅವಧಿಯ ಪರೀಕ್ಷೆಗಳನ್ನು ಆಗಸ್ಟ್ 31 ರೊಳಗೆ ನಡೆಸಬೇಕು. ಪರೀಕ್ಷೆಗಳನ್ನು ಆಫ್‌ಲೈನ್, ಆನ್‌ಲೈನ್ ಅಥವಾ ಸಂಯೋಜಿತ ಕ್ರಮದಲ್ಲಿ ನಡೆಸಬಹುದು ಎಂದು ಯುಜಿಸಿ ತಿಳಿಸಿದೆ.

Exit mobile version