ರಸ್ತೆಯಲ್ಲಿ ನಮಾಜ್ ಮಾಡಿದ 150 ಜನರ ಮೇಲೆ FIR ದಾಖಲಿಸಿದ ಯೋಗಿ ಸರ್ಕಾರ!

UP

ಪೊಲೀಸರ ಅನುಮತಿಯಿಲ್ಲದೇ ರಸ್ತೆಯಲ್ಲಿ ನಮಾಜ್ ಮಾಡಿದ 150ಕ್ಕೂ ಹೆಚ್ಚು ಜನರ ಮೇಲೆ ಉತ್ತರಪ್ರದೇಶದ(Uttarpradesh) ಪೊಲೀಸರು ಎಫ್‍ಐಆರ್(FIR) ದಾಖಲಿಸಿದ್ದಾರೆ.


ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ನಡೆಸದಂತೆ ಉತ್ತರಪ್ರದೇಶದ ಸಿಎಂ(CM) ಯೋಗಿ ಆದಿತ್ಯನಾಥ್(Yogi Adityanath) ಇತ್ತೀಚೆಗೆ ಖಡಕ್ ಸೂಚನೆ ನೀಡಿದ್ದರು. ಒಂದು ವೇಳೆ ರಸ್ತೆಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬೇಕಿದ್ದರೆ ಸ್ಥಳೀಯ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ ಎಂದು ಯೋಗಿ ಆದಿತ್ಯಾನಾಥ್ ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು.

ಆದರೆ ಉತ್ತರಪ್ರದೇಶದ ಆಗ್ರಾದಲ್ಲಿರುವ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜು ರಸ್ತೆಯಲ್ಲಿನ ಮಸೀದಿಯ ಹೊರಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹೀಗಾಗಿ ರಸ್ತೆಯಲ್ಲಿ ನಮಾಜ್ ಮಾಡಿದ 150ಕ್ಕೂ ಹೆಚ್ಚು ಜನರ ಮೇಲೆ ಆಗ್ರಾ ಪೊಲೀಸರು ಸೆಕ್ಷನ್ 144 ಉಲ್ಲಂಘಿಸಿದ್ದು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ರಸ್ತೆಗಳಲ್ಲಿ ನಮಾಜ್ ಮಾಡಲು ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕೆಲ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ನಮಾಜ್ ಮಾಡಲು ಅನುಮತಿ ನೀಡಿದ್ರೆ ನಾವು ರಸ್ತೆಗಳಲ್ಲೇ ಹನುಮಾನ್ ಚಾಲಿಸ್ ಪಠಣ ಮಾಡುತ್ತೇವೆ ಎಂದು ಹೇಳಿದ್ದವು. ಅನಿರೀಕ್ಷಿತ ಕೋಮು ಗಲಭೆಗಳನ್ನು ತಪ್ಪಿಸಲು ಸಿಎಂ ಯೋಗಿ ಆದಿತ್ಯನಾಥ್ ಯಾವುದೇ ಧಾರ್ಮಿಕ ಆಚರಣೆಗಳನ್ನು ರಸ್ತೆಗಳಲ್ಲಿ ನಡೆಸದಂತೆ ಸೂಚಿಸಿದ್ದರು. ನಿಮ್ಮ ಧಾರ್ಮಿಕ ಕಾರ್ಯಕ್ರಮಗಳು ನಿರ್ದಿಷ್ಟ ಸ್ಥಳಕ್ಕೆ ಮಾತ್ರ ಸಿಮೀತವಾಗಿರಲಿ ಎಂದು ಹೇಳಿದ್ದರು.

ಸಿಎಂ ಯೋಗಿ ಆದಿತ್ಯನಾಥ್ ನೀಡಿದ ಸೂಚನೆಯ ನಂತರವೂ ನಮಾಜ್ ಮಾಡಲಾಗಿದೆ. ಹೀಗಾಗಿ ಸರ್ಕಾರ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ 150 ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಯಾವುದೇ ಕೋಮುಗಲಭೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ರಾಮನವಮಿ ಶೋಭಾಯಾತ್ರೆ ವೇಳೆ 900 ಮೆರವಣಿಗೆಗಳು ಉತ್ತರಪ್ರದೇಶದಲ್ಲಿ ನಡೆದಿದ್ದು, ಯಾವುದೇ ಸಣ್ಣ ಗಲಭೆಯೂ ನಡೆದಿರಲಿಲ್ಲ.

Exit mobile version