ಉಪಸಭಾಪತಿ ಆತ್ಮಹತ್ಯೆ; ಡೆತ್ ನೋಟ್ ಪತ್ತೆ

ಚಿಕ್ಕಮಗಳೂರು, ಡಿ. 29: ಜೆಡಿಎಸ್ ಮುಖಂಡರಾಗಿದ್ದ ವಿಧಾನ ಪರಿಷತ್ ಉಪ ಸಭಾಪತಿ ಎಸ್. ಎಲ್ ಧರ್ಮೇಗೌಡ(65) ನಿನ್ನೆ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸತತವಾಗಿ ಕಳೆದ 25 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾಗಿ ಹಿಡಿತ ಸಾಧಿಸಿದ್ದರು. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಗೆದ್ದು ಇವರ ತಂಡ ಸೋಲನ್ನನುಭವಿಸಿದ್ದರು. ಇದರಿಂದ ಇವರಿಗೆ ರಾಜಕೀಯ ಹಿನ್ನಡೆಯಾಗಿ ಬೇಸರಗೊಂಡಿದ್ದರು. ಅಲ್ಲದೆ, ವಿಧಾನಪರಿಷತ್‍ನಲ್ಲಿ ಧರ್ಮೆಗೌಡರು ಸಭಾಪತಿ ಸ್ಥಾನದಲ್ಲಿ ಕುಳಿತಾಗ ಎಳೆದಾಡಿದ ಪ್ರಸಂಗದಿಂದ ತೀವ್ರ ಮುಜುಗರಕ್ಕೆ ಒಳಗಾದಂತೆ ಕಂಡು ಬಂದಿದ್ದರು.

ಅವರಿಗೆ ಹಲವು ದಿನಗಳಿಂದ ಎದೆನೋವಿನ ಸಮಸ್ಯೆಯಿಂದಾಗಿ ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತಲ್ಲದೆ, ಹಲವು ವೈಯಕ್ತಿಕ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಧರ್ಮೇಗೌಡ ಅವರು ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಮೇಲ್ಮನೆ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ನಡೆದ ವಿಧಾನಪರಿಷತ್ ಕಲಾಪದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯು ಅವರ ಮನಸ್ಸಿಗೆ ತೀವ್ರ ನೋವುಂಟು ಮಾಡಿತ್ತು. ಆ ಘಟನೆ ದೇಶದೆಲ್ಲೆಡೆ ಸುದ್ದಿ ಮಾಡಿತ್ತು.

ಸಂಜೆ 7 ಗಂಟೆ ವೇಳೆಗೆ ಹುಬ್ಬಳಿಯಿಂದ ಬೆಂಗಳೂರು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಶತಾಬ್ದಿ ರೈಲಿಗೆ ಕಾರಿನಿಂದ ಇಳಿದವರೆ ತಲೆ ಕೊಟ್ಟಿದ್ದು, ಶರೀರ ಛಿದ್ರವಾಗಿತ್ತು. ಇಂದು ಬೆಳಗಿನ ಜಾವ 2 ಗಂಟೆಯಲ್ಲಿ ಚಾಲಕನ ಮೂಲಕ ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಎಸ್ಪಿ ಅಕ್ಷಯ್‌, ಎಡಿಸಿ ಡಾ.ಕುಮಾರ್, ಧರ್ಮೇಗೌಡರ ಸಹೋದರ , ವಿಧಾನ ಪರಿಷತ್ ಶಾಸಕ ಎಸ್. ಎಲ್‌. ಭೋಜೇಗೌಡ, ಶಾಸಕ ಸಿ.ಟಿ.ರವಿ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ವಿವಿಧ ಪಕ್ಷಗಳ ಮುಖಂಡರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

Exit mobile version