Bengaluru: ಸರ್ಕಾರೀ ಬಸ್‌ಗಳಲ್ಲಿ ಪ್ರಯಾಣಿಸುವವವರಿಗೆ ರಾಜ್ಯ ಸರ್ಕಾರವು ಒಂದು ಸಿಹಿ ಸುದ್ದಿಯನ್ನು ಕೊಟ್ಟಿದೆ. ಇನ್ನು ಮುಂದೆ ಕರ್ನಾಟಕ (Karnataka) ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿಯೂ ಯುಪಿಐ ಆನ್ಲೈನ್ ಪೇಮೆಂಟ್ (UPI Online Payment) ವ್ಯವಸ್ಥೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ (Shopping Complex) ಮತ್ತು ಹೋಟೆಲ್‌ಗಳಲ್ಲಿ ಆನ್‌ಲೈನ್ ಪೇಮೆಂಟ್ ಇದ್ದು, ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಯಾಕಿಲ್ಲ ಎಂಬುದು ಲಕ್ಷಾಂತರ ಪ್ರಯಾಣಿಕರ ಪ್ರಶ್ನೆಯಾಗಿತ್ತು. ಈಗ ಸದ್ಯಕ್ಕೆ ಬಸ್‌ಗಳಲ್ಲಿ ಯುಪಿಐ (UPI) ವ್ಯವಸ್ಥೆ ಅಳವಡಿಸಿಕೊಳ್ಳಲು ರಾಜ್ಯ ಸಾರಿಗೆ ಸಂಸ್ಥೆಗಳು ಮುಂದಾಗಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಸದ್ಯ ಬೆಂಗಳೂರಿನ ಬಿಎಂಟಿಸಿ (BMTC) ಕೆಲ ಬಸ್‌ಗಳಲ್ಲಿ ಮಾತ್ರ ಈ ಆನ್‌ಲೈನ್ ಪೇಮೆಂಟ್ (Online Payment) ವ್ಯವಸ್ಥೆ ಜಾರಿಯಲ್ಲಿತ್ತು. ಮತ್ತು ರಾಜ್ಯಾದ್ಯಂತ ಈ ಸೌಲಭ್ಯವನ್ನು ವಿಸ್ತರಣೆ ಮಾಡಲು ಸಾರಿಗೆ ಸಂಸ್ಥೆಗಳು ಮುಂದಾಗಿದೆ. ಕಳೆದ ವಾರಾಂತ್ಯದಿಂದ ಹುಬ್ಬಳ್ಳಿ (Hubballi) ಘಟಕದ ಸಾಮಾನ್ಯ ವೇಗಧೂತ ಕೆಲ ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಈ ಬಗ್ಗೆ ವಾಯವ್ಯ ಸಾರಿಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಯುಪಿಐ (UPI) ಬಳಕೆ ಮಾಡುವುದು ಹೇಗೆ?
ಕಂಡಕ್ಟರ್‌ಗಳು (Conductor) ಬಸ್ಗಳಲ್ಲಿ ಐಡಿ ಕಾರ್ಡ್ ಮಾದರಿಯ ಯುಪಿಐ ಕ್ಯುಆರ್ ಕೋಡ್ (UPI QR Code) ಒಳಗೊಂಡಿರುವ ಟ್ಯಾಗ್ ಅನ್ನು ತಮ್ಮ ಕುತ್ತಿಗೆಗೆ ಹಾಕಿಕೊಂಡಿರುತ್ತಾರೆ. ಮತ್ತು ಟಿಕೆಟ್ ನೀಡುವ ಸಂದರ್ಭದಲ್ಲಿ ಕಂಡಕ್ಟರ್‌ಗೆ ಯಾವ ಊರಿಗೆ ಇಳಿಯಬೇಕು ಎಂದು ಹೇಳಿದರೆ ಟಿಕೆಟ್ ದರ (ಶುಲ್ಕ) ಇಂತಿಷ್ಟಾಗುತ್ತದೆ ಹೇಳುತ್ತಾರೆ. ಆಗ ಯುಪಿಐ ಪೇಮೆಂಟ್ ಮಾಡಲು ಇಷ್ಟ ಪಡುವ ಪ್ರಯಾಣಿಕರು ಆ ಟ್ಯಾಗ್‌ನಲ್ಲಿರುವ ಕೋಡ್ ಅನ್ನು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ (Mobile Scan) ಮಾಡಿ ಪೇಮೆಂಟ್ ಟಿಕೆಟ್ ಮೊತ್ತವನ್ನು ಪಾವತಿಸಬೇಕು. ಬಳಿಕ ಪೇಮೆಂಟ್ ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಂದೇಶವನ್ನು ನಿರ್ವಾಹಕರಿಗೆ ತೋರಿಸಿದರೆ ಆಯ್ತು. ಅವರು ಟ್ರಾನ್ಸೆಕ್ಷನ್ ಐಡಿ (Transaction ID) ಕೊನೆಯ ಸಂಖ್ಯೆ ಬರೆದುಕೊಂಡು ಅಥವಾ ಅವರ ಇಟಿಎಂ (ETM) ನಲ್ಲಿ ಸಂದೇಶ ಸ್ವೀಕರಿಸಿ ಟಿಕೆಟ್ ಕೊಡುತ್ತಾರೆ.

ಯುಪಿಐ ಪೇಮೆಂಟ್ ಅನುಕೂಲಗಳು:
೧. ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆ ತಪ್ಪಲಿದೆ.
೨. ಹಣ ಕೈಯಲ್ಲಿ ಇರದಿದ್ದರೂ ಕೂಡಾ ಬಸ್‌ನಲ್ಲಿ ಪ್ರಯಾಣ ಮಾಡಬಹುದು.
೩. ಪ್ರಯಾಣ ಮಾರ್ಗದ ಸ್ಟೇಜ್ (Stage) ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ.
೪. ನಗದು ಮುಕ್ತ ವ್ಯವಹಾರ.
೫. ಆತ್ಯಾಧುನಿಕ ತಂತ್ರಜ್ಞಾನ/ ಡಿಜಿಟಲ್ ಪೇಮೆಂಟ್ (Digital Payment) ಅಳವಡಿಕೆ ಹೆಗ್ಗಳಿಕೆ.
ಪೇಮೆಂಟ್ ಮಾಡಲು ಬಳಸಬೇಕಾದ ಆಪ್ಗಳು:
ಫೋನ್ ಪೇ (Phone pay)
ಗೂಗಲ್ ಪೇ (Google Pay)
ಪೇಟಿಎಂ (Paytm)
ಭೀಮ್ ಯುಪಿಐ (Bhim UPI)
ಮತ್ತು ಎಲ್ಲಾ ಬ್ಯಾಂಕ್‌ಗಳ ಮೊಬೈಲ್ ಆಪ್‌ಗಳು
ಅನೇಕ ಬಾರಿ ಆನ್‌ಲೈನ್ ಪೇಮೆಂಟ್ (Online Payment) ಸೇವೆ ಪರಿಚಯಿಸಲು ಸಾರಿಗೆ ಸಂಸ್ಥೆ ಮುಂದಾದರೂ ಇಂಟರ್ನೆಟ್ ಸಮಸ್ಯೆ, ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಸದ್ಯ ತಾಂತ್ರಿಕ ದೋಷಕ್ಕೆ ಪರಿಹಾರ ಸಿಕ್ಕಿದೆ ಎನ್ನುತ್ತಾರೆ ಬಸ್ ಕಂಡಕ್ಟರ್‌ಗಳು.
ಭವ್ಯಶ್ರೀ ಆರ್.ಜೆ