ವಾಟಾಳ್‌ಗೆ ಹೀಯಾಳಿಸಿ ಸವಾಲೆಸೆದ ಶಾಸಕ

ವಿಜಯಪುರ, ಡಿ. 03: ಇದೇ ತಂಗಳ 5ನೇ ತಾರೀಕಿನಂದು ಕರ್ನಾಟಕ ಬಂದ್‌ ಮಾಡುವುದಾಗಿ ಹೇಳಿರುವ ನಾಯಕ ವಾಟಾಳ್‌ ನಾಗರಾಜ್‌ ವಿರುದ್ಧ ಶಾಸಕ ಬಸವನ ಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದಿದ್ದಾರೆ. ವಾಟಾಳ್‌ ಒಬ್ಬ ಕುರಿ ಇದ್ದಂತೆ, ಆತನ ಮೇಲೆ ಯಾರು ಅಟ್ಯಾಕ್‌ ಮಾಡುತ್ತಾರೆ ಎಂದು ಹೀಯಾಳಿಸಿರುವ ಅವರು ಸವಾಲೊಂದನ್ನು ಹಾಕಿದ್ದಾರೆ.

ವಾಟಾಳ್‌ಗೆ ತಾಕತ್ತಿದ್ದರೆ ಕಲುಬುರ್ಗಿ ಕಾರ್ಪೋರೇಷನ್‌, ರೈಲು ನಿಲ್ದಾಣದ ಮೇಲಿರುವ ಉರ್ದು ಬೋರ್ಡ್‌ಗೆ ಮಸಿ ಬಳಿಯಲಿ. ಕನ್ನಡ ರಕ್ಷಣಾ ವೇದಿಕೆ ಹಾಗೂ ಕೆಲ ಹೋರಾಟಗಾರರು ಇದ್ದಾರಲ್ಲ ಅವರು ಹಿಂದಿ ಶಾಲೆ ಬಂದ್‌ ಮಾಡುತ್ತಾರೆ. ಹಿಂದಿ ಮೇಲೆ ದಬ್ಬಾಳಿಕೆ ಮಾಡುತ್ತಾರೆ, ಹಿಂದಿ ಬೋಡ್‌Fಗೆ ಮಸಿ ಬಳಿಯುತ್ತಾರೆ. ಇವರ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ. ಅನ್ನುವುದನ್ನು ಮೊದಲು ಬಹಿರಂಗ ಪಡಿಸಲಿ. ಕನ್ನಡ ಹೋರಾಟಗಾರರ ಮಕ್ಕಳು- ಮೊಮ್ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಾರೆ ಅನ್ನುವುದನ್ನು ತನಿಖೆ ನಡೆಸಬೇಕು. ಕನ್ನಡ ಸಂಸ್ಕೃತಿ ಇಲಾಖೆಯಿಂದ ಪಡೆದ ಹಣದ ವಿಚಾರ ಬಹಿರಂಗವಾಗಬೇಕು. ನಾವೆಲ್ಲ ಕನ್ನಡದಲ್ಲಿ ಸಹಿ ಮಾಡುತ್ತೇವೆ. ಇವರಿಂದ ಬುದ್ಧಿ ಕಲಿಯಬೇಕಿಲ್ಲ ಎಂದು ಯತ್ನಾಳ್‌ ಹೇಳಿದ್ದಾರೆ.

ವಾಟಾಲ್‌ಗೆ ನೀಡಿದ ಭದ್ರತೆ ಸರ್ಕಾರ ವಾಪಸ್‌ ಪಡೆದ ವಿಚಾರದಲ್ಲಿ ಮಾತನಾಡಿರುವ ಅವರು, ವಾಟಾಳ್‌ಗೆ ಯಾವುದೇ ಹಳೆ ನಾಯಿ ಕೂಡ ಹೊಡೆಯಲ್ಲ. ಅವರಿಗೆ ಹೊಡೆದು ಏನ್‌ ಮಾಡ್ತಾರೆ? ಯಾರು ಶೂರರು, ಧೀರರು ಇರುತ್ತಾರೆ ಅವರ ಮೇಲೆ ಆಕ್ರಮಣ ಮಾಡುತ್ತಾರೆ. ವಾಟಾಳ್‌ ಒಬ್ಬ ಕುರಿ, ಆತನ ಮೇಲೆ ಯಾರು ಅಟ್ಯಾಕ್‌ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ವಾಟಾಳ್‌ ನಾಗರಾಜ್‌ಗೆ ಬುದ್ಧಿ ಭ್ರಮಣೆಯಾಗಿದೆ. ಇವರದ್ದು ಅಡ್ಜಸ್ಟ್‌ಮೆಂಟ್‌ ರಾಜಕಾರಣ, ಸಿದ್ಧರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರ ಜತೆಗೂ ಅಡ್ಜಸ್ಟ್‌ ಆಗ್ತಾರೆ. ಯಾರ್ಯಾರು ಸಿಎಂ ಆಗುತ್ತಾರೆ ಎಲ್ಲರ ಜತೆಗೂ ವಾಟಾಳ್‌ ಅಡ್ಜಸ್ಟ್‌ಮೆಂಟ್‌ ಮಾಡಿಕೊಳ್ಳುತ್ತಾರೆ ಎಂದು ಅವರು ದೂರಿದ್ದಾರೆ.

Exit mobile version