Bengaluru: ಬೆಳಗಾವಿಯ (Belagavi) ವಿಧಾನಸಭೆಯಿಂದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (Vinayaka Damodara Savarkar) ಅವರ ಭಾವಚಿತ್ರವನ್ನು ತೆಗೆದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ (R Ashok), ಕಾಂಗ್ರೆಸ್ ಆಡಳಿತವು ಸಾವರ್ಕರ್ ಅವರ ಚಿತ್ರವನ್ನು ತೆಗೆದು ಅಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರ ಭಾವಚಿತ್ರವನ್ನು ಹಾಕಲು ಉದ್ದೇಶಿಸಿದೆ ಎಂದು ಆರೋಪಿಸಿದ್ದಾರೆ.

ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ ದೇಶಭಕ್ತರಾಗಿದ್ದರಿಂದ ಈ ಹಿಂದೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಅವರ ಫೋಟೋವನ್ನು ವಿಧಾನಸಭೆಯಲ್ಲಿ ಹಾಕಿತ್ತು. ಇದೀಗ ಅದನ್ನು ತೆಗೆದುಹಾಕಲು ಕಾಂಗ್ರೆಸ್ (Congress) ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ನೆಹರೂ ಅವರ ಫೋಟೋ ಹಾಕುವ ವಾದವು ವಂಶಪಾರಂಪರ್ಯ ರಾಜಕಾರಣವನ್ನು ವೈಭವೀಕರಿಸುವ ಒಂದು ರೂಪವಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ (Karnataka) ಅಜ್ಜ, ತಾಯಿ, ಮಗ ಮತ್ತು ಮೊಮ್ಮಗನ ಫೋಟೋಗಳನ್ನು ಮಾತ್ರ ಪ್ರದರ್ಶಿಸಲು ಆದ್ಯತೆ ನೀಡುತ್ತಿದೆ. ಪ್ರತಿಪಕ್ಷವಾಗಿ ನಾವು ಆಡಳಿತಾರೂಢ ಸರ್ಕಾರವನ್ನು ಎದುರಿಸಿ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರದ ಕೋಮುವಾದಿ ಕ್ರಮಗಳು ಮತ್ತು ಟಿಪ್ಪು ಸುಲ್ತಾನ್ (Tippu Sultan) ಅವರ ಸಿದ್ಧಾಂತಗಳ ಹೇರಿಕೆಯನ್ನು ಬಿಜೆಪಿ (BJP) ವಿರೋಧಿಸುತ್ತದೆ ಎಂದು ಆರ್. ಅಶೋಕ ಹೇಳಿದ್ದಾರೆ.

2022ರಲ್ಲಿ, ಡಿಸೆಂಬರ್ನಲ್ಲಿ (December) ಚಳಿಗಾಲದ ಅಧಿವೇಶನದ ಮೊದಲ ದಿನದಂದು, ಹಿಂದಿನ ಬಿಜೆಪಿ ಸರ್ಕಾರವು ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿತ್ತು. ಈ ಕ್ರಮವು ಬೆಳಗಾವಿ ವಿಧಾನಸಭೆಯೊಳಗೆ ಸಾವರ್ಕರ್ ಅವರ ಚಿತ್ರವನ್ನು ಸೇರಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಿತ್ತು. ಗಾಂಧಿ (Gandhi), ಸುಭಾಷ್ಚಂದ್ರ ಬೋಸ್, ಸರ್ದಾರ್ ಪಟೇಲ್ (Sardar Patel), ಬಿಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣ ಅವರ ಚಿತ್ರಗಳನ್ನು ಸಹ ಇದೇ ವೇಳೆ ಅನಾವರಣಗೊಳಿಸಲಾಗಿತ್ತು.
ಇನ್ನು ಆರೋಪ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ (UT Khader), ಸಾರ್ವಕರ್ ಅವರ ಫೋಟೋ ತೆಗೆಯುವ ಯಾವುದೇ ಪ್ರಸ್ತಾಪವಿಲ್ಲ. ವಿಧಾನಸಭೆಯಲ್ಲಿ ಅಂತಹ ಯಾವುದೇ ಬದಲಾವಣೆಯಾದರೆ ಆ ಬಗ್ಗೆ ನಾವು ರಾಜ್ಯದ ಜನರಿಗೆ ತಿಳಿಸುತ್ತೇವೆ ಎಂದು ಖಾದರ್ ಹೇಳಿದ್ದಾರೆ.