ಚಾಮುಂಡಿಬೆಟ್ಟಕ್ಕೆ ಬಸವರಾಜ ಬೊಮ್ಮಾಯಿ ಭೇಟಿ: ಮೇಕೆದಾಟು ಯೋಜನೆ ಸಂಬಂಧ ಶೀಘ್ರವೇ ದೆಹಲಿ ನಾಯಕರೊಂದಿಗೆ ಚರ್ಚಿಸುವೆ ಎಂದ ಬೊಮ್ಮಾಯಿ

ಮೈಸೂರು, ಆ. 09: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಡಿಪಿಆರ್ ತಯಾರಾಗಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನ ಭೇಟಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನ‌ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಮೊದಲಿನಿಂದಲೂ ಇದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಮುಂದಿಟ್ಟುಕೊಂಡು ಎಷ್ಟೋ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ. ತಮಿಳುನಾಡಿನವರು ಏನೇ ಹೇಳಿದರು ನಾವು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ.

ಕಾವೇರಿ ಕೊಳ್ಳದಲ್ಲಿ ಲಭ್ಯವಾಗುವ ಗರಿಷ್ಠ ಪ್ರಮಾಣದ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ.
ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನ ಭೇಟಿ ಮಾಡುತ್ತೇನೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕಾನೂನಾತ್ಮಕ ವಾಗಿ ನಮಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುತ್ತೇನೆ ಎಂದರು.

ಈ ಸಂಬಂಧ ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸುತ್ತೇನೆ.
ನಮ್ಮ ನೀರು ನಮ್ಮ ಹಕ್ಕು ಅದನ್ನು ಪಡೆದುಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನೂ ಸಚಿವ ಸಂಪುಟ ರಚನೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದ ಅವರು, ಸಚಿವ ಸಂಪುಟ ರಚನೆಯಾಗಿದ್ದು, ಎಲ್ಲರೂ ಸಹಕಾರ ಕೊಡುತ್ತಿದ್ದಾರೆ.
ಸಣ್ಣಪುಟ್ಟ ಅಸಮಾಧಾನ ಇರಬಹುದು. ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇನ್ನೂ ಮೈಸೂರಿನ ಶಾಸಕ ರಾಮದಾಸ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಮದಾಸ್ ನನ್ನ ಆತ್ಮೀಯ ಸ್ನೇಹಿತರು, ಪಕ್ಷದಲ್ಲಿ ಅವರು ಹಿರಿಯರಾಗಿದ್ದು, ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಮೈಸೂರಿನ‌ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಇನ್ನೂ, ಕೊರೊ‌‌ನಾ ಪರಿಸ್ಥಿತಿ ನಿರ್ವಹಣೆ ಹಾಗೂ ಲಾಕ್ ಡೌನ್ ನಿಯಮ ಜಾರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂವನ್ನ ಗಡಿ ಜಿಲ್ಲೆಗಳ ಸ್ಥಿತಿಗತಿ ಮೇಲೆ ನಿರ್ಧರಿಸಿ ಆದೇಶ ಮಾಡಲಾಗಿದೆ. ಈಗ ಮೈಸೂರಿನ ಬಗ್ಗೆ ಸಭೆ ಮಾಡಿ ಚರ್ಚೆ ಮಾಡುತ್ತೇವೆ. ಆ ಮೂಲಕ ಮಹಾರಾಷ್ಟ್ರ ಹಾಗೂ ಕೇರಳ ಭಾಗದಿಂದ ಬರುವ ಪ್ರವಾಸಿಗರ ಮೇಲೆ ನಿಗಾವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿ ನಿಭಾಯಿಸುವುದಾಗಿ ತಿಳಿಸಿದರು.

Exit mobile version