ವೀಕೆಂಡ್ ಕರ್ಫ್ಯೂ ಹಿನ್ನೆಲೆ: ಕರುನಾಡು ಸಂಪೂರ್ಣ ಸ್ತಬ್ಧ; ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಬೆಂಗಳೂರು, ಏ. 24: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಬಂದ್ ಆಗಿದೆ.

ರಾಜ್ಯದಲ್ಲಿ ನಿನ್ನೆ ರಾತ್ರಿ 9 ಗಂಟೆಯಿಂದಲೇ ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಿದ್ದು ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಇನ್ನು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ತರಾತುರಿಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ವೀಕೆಂಡ್ ಕರ್ಫ್ಯೂ ನಲ್ಲಿ ಅಗತ್ಯ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಈ ನಡುವೆ ಔಷಧಿ, ತರಕಾರಿ, ಹಣ್ಣು, ಹಾಲು, ವೈದ್ಯಕೀಯ, ದಿನಸಿ ಅಂಗಡಿಗಳು ಹೊರತುಪಡಿಸಿದರೆ ವಾಣಿಜ್ಯ ವಹಿವಾಟುಗಳು ಬಂದ್ ಆಗಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ಲಭ್ಯವಿರಲಿದೆ.

ಬೆಂಗಳೂರಿನ ಹಲವೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ವಾಹನಗಳನ್ನ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಇನ್ನು ಬಿಎಂಟಿಸಿ ಬಸ್ ಸೇವೆ ಸೋಮವಾರ ಬೆಳಿಗ್ಗೆ 6ವರೆಗೂ ಬಂದ್ ಆಗಿದ್ದು, ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ. ಇನ್ನು ಮೆಟ್ರೋ ಸಹ ಬಂದ್ ಆಗಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಸ್ತಬ್ಧ ವಾತಾವರಣ ಕಂಡು ಬಂದಿದೆ.

Exit mobile version