ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ: 43 ಸಚಿವರು ಪ್ರಮಾಣ ವಚನ ಸ್ವೀಕಾರ

ಕೊಲ್ಕತ್ತಾ, ಮೇ. 10: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು 43 ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 19 ರಾಜ್ಯ ಸಚಿವರಿಗೆ ಕೊಲ್ಕತ್ತಾದ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಜಗದೀಪ್ ಧನ್ಕರ್ ಪ್ರಮಾಣ ವಚನ ಬೋಧಿಸಿದರು. ಮಾಜಿ ವಿತ್ತ ಸಚಿವ ಅಮಿತ್ ಮಿಶ್ರಾ ಅವರು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಮಮತಾ ಬ್ಯಾನರ್ಜಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿರಿಯ ನಾಯಕರಲ್ಲಿ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಜ್ಯೋತಿ ಪ್ರಿಯಾ ಮಲ್ಲಿಕ್, ಮೊಲೊಯ್ ಘಾಟಕ್, ಅರೂಪ್ ಬಿಸ್ವಾಸ್, ಡಾ.ಶಶಿ ಪಂಜ ಮತ್ತು ಜಾವೇದ್ ಅಹ್ಮದ್ ಖಾನ್ ಇದ್ದರು. ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್, ಬಂಗಾಳದ ಮಾಜಿ ರಣಜಿ ನಾಯಕ ಮನೋಜ್ ತಿವಾರಿ ಮತ್ತು ಸಿಯುಲಿ ಸಹಾ ಸೇರಿದಂತೆ 15 ನೂತನ ಸಚಿವರು ಇದ್ದಾರೆ.

ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) 10 ಸಚಿವರ ಪಟ್ಟಿಯಲ್ಲಿ ಕಬೀರ್ ಸೇರಿದ್ದರೆ, ತಿವಾರಿ ಮತ್ತು ಸಾಹ ಅವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ಶಾಸಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮೇ 5 ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Exit mobile version