Bengaluru: ಸಂಚಾರಿ ನಿಯಮಗಳು ಕಠಿನವಾಗುತ್ತಿದೆ ಆದರೆ ರಸ್ತೆಗಳು ಮಾತ್ರ ಸಂಪೂರ್ಣವಾಗಿ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಇದೀಗ ಈ ಸಮಸ್ಯೆಯಿಂದ ಮುಕ್ತಿ ಸಿಗುವ ಸೂಚನೆ ಸಿಗುತ್ತಿದೆ. ಬೆಂಗಳೂರಿನ (Bengaluru) 43 ರಸ್ತೆಗಳಿಗೆ 15 ಪ್ಯಾಕೇಜ್ನಲ್ಲಿ ವೈಟ್ ಟಾಪಿಂಗ್ ಮಾಡಲು ಪಾಲಿಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲು ತಯಾರಿ ನಡೆಸಿದೆ. ಯಾವೆಲ್ಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂಬ ವಿವರಗಳು ಹೀಗಿವೆ.
![BBMP](https://sp-ao.shortpixel.ai/client/to_webp,q_glossy,ret_img,w_1024,h_614/https://vijayatimes.com/wp-content/uploads/2023/09/1300923-bbmp-1024x614.webp)
ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿದ್ದ ಬೆಂಗಳೂರಿನ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಜ್ಜಾಗಿರುವ ಬಿಬಿಎಂಪಿ (BBMP), ಶೀಘ್ರದಲ್ಲೇ ಕಾಮಗಾರಿ ಶುರು ಮಾಡಲು ತಯಾರಿ ನಡೆಸಿದೆ. ನಗರದ 43 ರಸ್ತೆಗಳಿಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ನಡೆಸೋಕೆ ತಯಾರಿ ನಡೆದಿದ್ದು, ಈ ಬಗ್ಗೆ ಬಿಬಿಎಂಪಿ ಸಭೆ ನಡೆಸಿದೆ. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಲೈನ್, ಕೇಬಲ್ (Pipe Line, Cable) ಅಳವಡಿಕೆ ಇದ್ದರೆ ಕಾಮಗಾರಿಗೂ ಮೊದಲೇ ಮುಗಿಸುವಂತೆ ಬಿಡಿಎ (BDA), ಜಲಮಂಡಳಿ ಹಾಗೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ಎಂಜಿ ರಸ್ತೆಯ ಮಹಾತ್ಮಾ ಗಾಂಧಿ (Mahathma Gandhi) ವೃತ್ತದಿಂದ ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆಯಿಂದ ರಿಚ್ಮಂಡ್ ವೃತ್ತ, ಸಿಟಿ ಸಿವಿಲ್ ಕೋರ್ಟ್ ರಸ್ತೆಯಿಂದ ಮೈಸೂರು ಬ್ಯಾಂಕ್ ವೃತ್ತ-ಕೆಆರ್ ವೃತ್ತ, ತಿಮ್ಮಯ್ಯ ರಸ್ತೆಯಿಂದ ನಿಸ್ವಾನ್ ಸ್ಕೂಲ್-ಕಾಮರಾಜ ರಸ್ತೆ, ಅತ್ತಿಗುಪ್ಪೆ 14ನೇ ಮುಖ್ಯ ರಸ್ತೆಯಿಂದ ಕಾರ್ಡ್ ರಸ್ತೆ- ಗಣಪತಿ ವೃತ್ತ, ವಿಜಯನಗರ ಟಿಟಿಎಂಸಿ (Vijayanagar TTMC)ಯಿಂದ ವಿಜಯ ನಗರ ಮಾರ್ಕೆಟ್ ಸಿಗ್ನಲ್, ಮಲ್ಲೇಶ್ವರಂ 8ನೇ ಮುಖ್ಯ ರಸ್ತೆಯಿಂದ 18ನೇ ಕ್ರಾಸ್ನ ಚಿತ್ರಾಪುರ ಮಠ, ಸಹಕಾರ ನಗರ 20ನೇ ಕ್ರಾಸ್ನಿಂದ ಕೊಡಿಗೇಹಳ್ಳಿ ಮುಖ್ಯ ರಸ್ತೆ-ರಾಧಾಕೃಷ್ಣ ಚೌಲ್ಟ್ರಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/07/IMG_1995-1024x576.jpg)
ಅಲ್ಲದೆ, ಗೋವಿಂದರಾಜ ನಗರದ ಸರ್ವಜ್ಞ ಸ್ಕೂಲ್ ಸಿಗ್ನಲ್ ಜಂಕ್ಷನ್ನಿಂದ ರಹೇಜಾ ಅಪಾರ್ಟ್ಮೆಂಟ್ (Raheja Apartment), ಜಯನಗರ 22ನೇ ಕ್ರಾಸ್ ರಸ್ತೆಯಿಂದ 3 ಬ್ಲಾಕ್ ಜಂಕ್ಷನ್-ಕೂಲ್ ಜಾಯಿಂಟ್, ಬುಲ್ ಟೆಂಪಲ್ ರಸ್ತೆಯಿಂದ ರಾಯನ್ ವೃತ್ತ-5ನೇ ಮುಖ್ಯ ರಸ್ತೆ, ರೇಸ್ ಕೋರ್ಸ್ ರಸ್ತೆಯಿಂದ ಮೌರ್ಯ ಜಂಕ್ಷನ್-ಹರೇಕೃಷ್ಣ ಜಂಕ್ಷನ್ (Harekrishna Junction) ಸೇರಿದಂತೆ ಒಟ್ಟು 105 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ.
ಒಟ್ಟಿನಲ್ಲಿ ಗುಂಡಿ ಗಂಡಾಂತರಕ್ಕೆ ಪರಿಹಾರ ಕಂಡುಹಿಡಿಯಲಾಗದೆ ಸುಸ್ತಾಗಿದ್ದ ಪಾಲಿಕೆ, ಇದೀಗ ರಾಜಧಾನಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡ ಹೊರಟಿದೆ. ಶುಕ್ರವಾರದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ.