ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ

ಕೊಲ್ಕತ್ತಾ, ಏ. 22: ಒಂದು ದೇಶ, ಒಂದು ಪಕ್ಷ, ಒಬ್ಬನೇ ನಾಯಕ ಎಂದು ಬಿಜೆಪಿ ಸದಾ ಹೇಳುತ್ತಲೇ ಇರುತ್ತದೆ. ಆದರೆ ಜನರ ಜೀವ ರಕ್ಷಿಸಲಿರುವ ಲಸಿಕೆಗೆ ಒಂದೇ ಬೆಲೆ ನಿಗದಿ ಮಾಡಿಲ್ಲ ಯಾಕೆ? ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಸಿದ್ದಾಂತ, ಸ್ಥಳ ಬೇಧವಿಲ್ಲದ ಉಚಿತ ಲಸಿಕೆ ನೀಡಬೇಕಿದೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಏಕರೂಪದ ಬೆಲೆ ನಿಗದಿ ಮಾಡಬೇಕು. ಅದು ಇಲ್ಲದೇ ಇದ್ದರೆ ಯಾರು ಪಾವತಿಮಾಡುತ್ತಾರೆ? ಕೇಂದ್ರ ಸರ್ಕಾರ ಮಾಡುತ್ತದೆಯೇ? ಅಥವಾ ರಾಜ್ಯ ಸರ್ಕಾರಗಳು ಮಾಡಬೇಕೆ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಟ್ವೀಟ್ ಮಾಡಿದ್ದಾರೆ.

ಲಸಿಕೆಗಳನ್ನು ಕೇಂದ್ರಕ್ಕೆ ₹ 150 ಕ್ಕೆ ಮಾರಾಟ ಮಾಡಲಾಗಿದ್ದು, ಈಗ ರಾಜ್ಯಗಳಿಗೆ ₹ 400 ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 600 ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ತುರ್ತು ಸಮಯದಲ್ಲಿ ನೀವು ಜನರಿಗೆ ಸಹಾಯ ಮಾಡುತ್ತೀರಾ ಅಥವಾ ವ್ಯಾಪಾರ ಮಾಡುತ್ತೀರಾ? ಎಂದು ಮಮತಾ ಪ್ರಶ್ನಿಸಿದ್ದಾರೆ.

ಚುನಾವಣಾ ಫಲಿತಾಂಶಗಳು ಘೋಷಣೆಯಾದ ಕೂಡಲೇ ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ಲಸಿಕೆ ವಿತರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ₹ 100 ಕೋಟಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ.

Exit mobile version