ಜೀವಂತ ಕಾಡುಪ್ರಾಣಿ ಮಾರಾಟ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ

ಜಿನೇವಾ, ಏ. 14: ಇನ್ಮುಂದೆ ಯಾವುದೇ ದೇಶದ ಪ್ರಾಣಿ ಮಾರುಕಟ್ಟೆಯಲ್ಲಿ ಜೀವಂತ ಕಾಡುಪ್ರಾಣಿಗಳನ್ನು (ಸಸ್ತನಿಗಳು) ಮಾರಾಟ ಮಾಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾದ ವುಹಾನ್​ನಲ್ಲಿ ಇಂಥದ್ದೇ ಜೀವಂತ ಪ್ರಾಣಿಗಳ ಮಾರುಕಟ್ಟೆಯಿಂದ ಹಾರುವ ಸಸ್ತನಿಗಳಾದ ಬಾವಲಿಗಳಿಂದ ಕೊರೊನಾ ಸೋಂಕು ಮನುಷ್ಯರಿಗೆ ಹರಡಿತು ಎಂಬುದು ಈವರೆಗೆ ಜಗತ್ತು ನಂಬಿಕೊಂಡಿರುವ ಸತ್ಯ. ಈ ಹಿನ್ನೆಲೆಯಲ್ಲಿಯೇ ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳಬಹುದಾದ ಹೊಸ ಸೋಂಕು ಅಥವಾ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ಸೂಚನೆ ನೀಡಿರುವುದಾಗಿ ತಿಳಿಸಿದೆ. ವಿಶ್ವಸಂಸ್ಥೆಯ ಆದೇಶದಲ್ಲಿ ‘ಸಸ್ತನಿ’ ಎಂಬ ಉಲ್ಲೇಖ ಇರುವುದನ್ನು ಗಮನಿಸಬೇಕು.

ದೊಡ್ಡ ಸಂಖ್ಯೆಯ ಜನಸಾಮಾನ್ಯರಿಗೆ ಆಹಾರ ಮತ್ತು ದೈನಂದಿನ ಅಗತ್ಯಗಳನ್ನು ಪೂರೈಸುವಲ್ಲಿ ಸಂತೆಯಂಥ ಸ್ಥಳೀಯ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಸ್ಥಳೀಯ ಮಾರುಕಟ್ಟೆಗಳಲ್ಲಿ ಕೆಲಸ ನಿರ್ವಹಿಸುವ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜೀವಂತ (ಸಸ್ತನಿ) ವನ್ಯಜೀವಿಗಳನ್ನು ಮಾರಬಾರದು ಎಂದು ಡಬ್ಲ್ಯುಎಚ್​ಓ ಸೂಚನೆ ನೀಡಿದೆ.

ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಜೀವಂತ ಪ್ರಾಣಿಗಳನ್ನು ಹಿಡಿದಿಟ್ಟುಕೊಳ್ಳುವುದು, ಹತ್ಯೆ ಮಾಡುವುದು ಕಾರ್ಮಿಕರು ಮತ್ತು ಗ್ರಾಹಕರಿಗೆ ರೋಗಗಳ ಹರಡುವಿಕೆಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳು ತಿಳಿಸಿದೆ. ಇಷ್ಟೇ ಅಲ್ಲದೇ ಮುಂಜಾಗರೂಕತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಜೀವಂತ ವನ್ಯಜೀವಿಗಳನ್ನು ಮಾರುವ ಮಾರುಕಟ್ಟೆಗಳನ್ನು ಮುಚ್ಚಲು ಸಹ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವುದರಿಂದ ಯಾವುದೇ ಕಾಡುಪ್ರಾಣಿಗಳನ್ನು ಜೀವಂತ ಅಥವಾ ನಿರ್ಜೀವ ಸ್ಥಿತಿಯಲ್ಲಿ ಮಾರಾಟ ಮಾಡುವುದು, ಮಾಂಸ ಸೇವನೆ, ಕೊಲ್ಲುವುದು, ಬೇಟೆಯಾಡುವುದು, ಅದರ ಭಾಗಗಳನ್ನು ತುಂಡರಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಸಸ್ತನಿಗಳ ಜೊತೆಗೆ ಸರಿಸೃಪಗಳು, ಪಕ್ಷಿಗಳಿಗೂ ಅನ್ವಯಿಸುತ್ತದೆ.

Exit mobile version