ವಿಶ್ವ ಟೆಸ್ಟ್ ಚಾಂಪಿಯನ್ಷಿಪ್: ಭಾರತಕ್ಕೆ ಹೀನಾಯ ಸೋಲು; ನ್ಯೂಜಿಲ್ಯಾಂಡ್ ಮಡಿಲಿಗೆ ಚೊಚ್ಚಲ ಪ್ರಶಸ್ತಿ

ಸೌತ್ ಹ್ಯಾಂಪ್ಟನ್,ಜೂ.24: ಮಳೆರಾಯನ ಆಟದ ನಡುವೆಯೂ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾ ವಿರುದ್ಧ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾದ ನ್ಯೂಜಿಲ್ಯಾಂಡ್, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಿವೀಸ್, ಕೊಹ್ಲಿ ಪಡೆಗೆ ಕಡಿವಾಣ ಹಾಕಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಹಾಗೂ ಐಸಿಸಿ ಟ್ರೋಫಿ ಗೆಲ್ಲುವ ಭಾರತದ 8 ವರ್ಷಗಳ ಕನಸು ಭಗ್ನಗೊಂಡಿತು.

ಪಂದ್ಯದ ಮೀಸಲು ದಿನವಾದ ಬುಧವಾರದ ಆಟದಲ್ಲಿ ಕಿವೀಸ್ ವೇಗಿ ಕೈಲ್ ಜೆಮಿಸನ್, ಟೀಂ ಇಂಡಿಯಾ ಲೆಕ್ಕಾಚಾರವನ್ನೆಲ್ಲಾ ಹುಸಿಯಾಗಿಸಿದರು. ದಿನದ ಮೊದಲ ಅವಧಿಯ ಆಟದಲ್ಲೇ ವಿರಾಟ್ ಕೊಹ್ಲಿ ಹಾಗು ಪುಜಾರ ವಿಕೆಟ್ ಪಡೆದ ಜೆಮಿಸನ್, ಕಿವೀಸ್ ಪಡೆಗೆ ಮೇಲುಗೈ ತಂದುಕೊಟ್ಟರು. ಇದರ ನಡುವೆ ಉತ್ತಮವಾಗಿ ಆಡುತ್ತಿದ್ದ  ರಿಷಭ್ ಪಂತ್(41) ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ 2ನೇ ಇನ್ನಿಂಗ್ಸ್ ನಲ್ಲಿ ಭಾರತ 170 ರನ್ ಗಳಿಗೆ ಸರ್ವಪತನ ಕಂಡಿತು.

ಬಳಿಕ 139 ರನ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಂಸನ್(52*) ಹಾಗೂ ರಾಸ್ ಟೇಲರ್(47*) ಅವರ ಜವಾಬ್ದಾರಿಯ ಆಟದ ನೆರವಿನೊಂದಿಗೆ ಗೆಲುವಿನ‌ ದಡ ಸೇರುವ ಮೂಲಕ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತು. ಕೀವಿಸ್ ಪರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯುವ ವೇಗಿ ಕೈಲ್ ಜೆಮಿಸನ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು.

Exit mobile version