ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಫೈಟ್: ಭಾರತ ಹಾಗೂ ನ್ಯೂಜಿ಼ಲ್ಯಾಂಡ್ ತಂಡ ಪ್ರಕಟ

ಮುಂಬೈ,ಜೂ.16: ಬಹು ನಿರೀಕ್ಷಿತ ಭಾರತ ಹಾಗೂ ನ್ಯೂಜಿ಼ಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಉಭಯ ತಂಡಗಳು ಈಗಾಗಲೇ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ.

ಕ್ರಿಕೆಟ್ ಜಗತ್ತಿನ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಆಂಗ್ಲರ ನಾಡಿನಲ್ಲಿ ಬಿಗ್ ಸ್ಟೇಜ್ ಸೆಟ್ಟಾಗಿದೆ. ಸೌತ್ಹಾಂಪ್ಟನ್ ನಲ್ಲಿ ಜೂ.18ರಿಂದ ನಡೆಯುವ ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳು ತಮ್ಮದೇ ರಣತಂತ್ರ ರೂಪಿಸಿಕೊಂಡಿವೆ‌. ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಎರಡು ತಂಡಗಳ ಆಟಗಾರರು ಈಗಾಗಲೇ ಸೌತ್ಹಾಂಪ್ಟನ್ ತಲುಪಿದ್ದು, ಕಠಿಣ ಅಭ್ಯಾಸ ನಡೆಸುವ ಮೂಲಕ ಅತ್ಯುತ್ತಮ ತಯಾರಿ ಮಾಡಿಕೊಂಡಿದ್ದಾರೆ.

ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಚೊಚ್ಚಲ ಫೈನಲ್ ಪಂದ್ಯಕ್ಕೆ ಎರಡು ತಂಡಗಳು 15 ಆಟಗಾರರ ತಂಡವನ್ನ ಪ್ರಕಟಿಸಿವೆ. 15 ಮಂದಿಯ ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ನೀಡಿಲ್ಲ.

ಉಳಿದಂತೆ ವಿರಾಟ್ ಕೊಹ್ಲಿ (ನಾಯಕ), ಶುಭಮನ್ ಗಿಲ್‌, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್‌ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್‌,
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಉಮೇಶ್ ಯಾದವ್‌ ಹಾಗೂ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನ್ಯೂಜಿ಼ಲ್ಯಾಂಡ್ ಸಹ ಫೈನಲ್ ಪಂದ್ಯಕ್ಕಾಗಿ 15 ಮಂದಿ ಆಟಗಾರರನ್ನು ಪ್ರಕಟಿಸಿದ್ದು, ನಾಯಕ ಕೇನ್ ವಿಲಿಯಂಸನ್ ಹಾಗೂ ವಿಕೇಟ್ ಕೀಪರ್ ವಾಟ್ಲಿಂಗ್ ತಂಡಕ್ಕೆ ಮರಳಿರುವುದು ಕೀವಿಸ್ ಬಲ ಹೆಚ್ಚಿಸಿದೆ. ಈ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ಉಳಿದಂತೆ ಕೇನ್ ವಿಲಿಯಂಸನ್ (ನಾಯಕ), ಟಾಮ್ ಬ್ಲಂಡಲ್, ಟ್ರೆಂಟ್ ಬೌಲ್ಟ್, ಡಿವೆನ್ ಕಾನ್ವೆ, ಕಾಲಿನ್ ಗ್ರ್ಯಾಂಡೊಮ್ಮೆ, ಮ್ಯಾಟ್ ಹೆನ್ರಿ, ಕೈಲ್ ಜೆಮಿಸನ್, ಟಾಮ್ ಲಾಥಂ, ಹೆನ್ರಿ ನಿಕೋಲ್ಸ್, ಅಜಾಜ಼್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೈಲ್ ವ್ಯಾಂಗ್ನರ್, ಬಿಜೆ ವಾಟ್ಲಿಂಗ್ ಹಾಗೂ ವಿಲ್ ಯಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version