ಕುಸ್ತಿಪಟು ಸುಶೀಲ್ ಕುಮಾರ್‌ ದೊಣ್ಣೆ ಹಿಡಿದು ಹಲ್ಲೆ ನಡೆಸಿರುವ ವಿಡಿಯೊ ವೈರಲ್‌

ನವದೆಹಲಿ, ಮೇ. 28: ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕುಸ್ತಿಪಟು ಸುಶೀಲ್ ಕುಮಾರ್‌ ಮತ್ತು ಸಹಚರರು, ಕೆಲವು ವ್ಯಕ್ತಿಗಳಿಗೆ ದೊಣ್ಣೆಯಿಂದ ಬಾರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಆ ವಿಡಿಯೊ ಗುರುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವ್ಯಕ್ತಿಯೊಬ್ಬ ಗಾಯದಿಂದ ಒದ್ದಾಡುತ್ತ ನೆಲಕ್ಕೆ ಉರುಳಿದ್ದಾನೆ. ಸುಶೀಲ್ ಕುಮಾರ್ ಮತ್ತು ಅವರ ಸಹಚರರು ದೊಣ್ಣೆಗಳನ್ನು ಹಿಡಿದು ಹೊಡೆಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ವಿಡಿಯೊದ ನೈಜತೆಯ ಕುರಿತಂತೆ ದೆಹಲಿ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಛತ್ರಸಾಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ 23 ವರ್ಷದ ಕುಸ್ತಿಪಟು ಸಾಗರ್ ಅಸುನೀಗಿದ್ದರು. ಅವರ ಇಬ್ಬರು ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಮಾಡೆಲ್‌ ಟೌನ್‌ ಪ್ರದೇಶದಲ್ಲಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೇ 4ರ ರಾತ್ರಿ ಜಗಳ ನಡೆದಿತ್ತು. ಇದೇ ಪ್ರಕರಣದಲ್ಲಿ ಸುಶೀಲ್ ಕುಮಾರ್‌ ಸೇರಿದಂತೆ ಈವರೆಗೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖಾ ತಂಡವು ಸುಶೀಲ್ ಕುಮಾರ್ ಅವರ ಮೊಬೈಲ್‌ ಫೋನ್‌ಗಾಗಿ ಶೋಧ ಕಾರ್ಯ ನಡೆಸುತ್ತಿದೆ.

Exit mobile version