ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ವೇಗಿ ಸ್ಟುವರ್ಟ್ ಬ್ರಾಡ್, ಟೆಸ್ಟ್ ಕ್ರಿಕೆಟ್‍ನಲ್ಲಿ 500 ವಿಕೆಟ್ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಈ ಸಾಧನೆ ಮೆರೆದಿದ್ದಾರೆ. ಆ ಮೂಲಕ ವಿಶ್ವ ಕ್ರಿಕೆಟ್‍ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ 7ನೇ ಹಾಗೂ ಇಂಗ್ಲೆಂಡ್‍ನ 2ನೇ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ಜಿಮ್ಮಿ ಆಂಡರ್‍ಸನ್(589* ವಿಕೆಟ್) ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ 500 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದ್ದಾರೆ.
2007ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ 34 ವರ್ಷದ ಸ್ಟುವರ್ಟ್ ಬ್ರಾಡ್, 140 ಟೆಸ್ಟ್ ಪಂದ್ಯವಾಡಿದ್ದು, ಒಟ್ಟು 500* ವಿಕೆಟ್ ಪಡೆದಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ 15 ರನ್ ನೀಡಿ 8 ವಿಕೆಟ್ ಪಡೆದಿರುವುದು ಸ್ಟುವರ್ಟ್ ಬ್ರಾಡ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ವಿಂಡೀಸ್ ವಿರುದ್ಧ ನಡೆದ 3 ಪಂದ್ಯಗಳ ಸರಣಿಯಲ್ಲಿ 15ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದು, ಐಸಿಸಿ ಟೆಸ್ಟ್ ಚಾಂಪಿಯನ್‍ಷಿಪ್‍ನಲ್ಲಿ ಅತ್ಯಧಿಕ ವಿಕೆಟ್ ಪಡೆದು ಮಿಂಚಿದ್ದಾರೆ.