ಡ್ರಗ್‍ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ದಿಗಂತ್-ಐಂದ್ರಿತಾಗೆ ಸಿಸಿಬಿ ಬುಲಾವ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಚಲನಚಿತ್ರ ನಟ ದಿಗಂತ್‌ ಹಾಗೂ ಐಂದ್ರಿತಾ ರೈ ಅವರಿಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್‌ ನೀಡಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್‌ ನೀಡಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಈ ನಡುವೆ ಸಿಸಿಬಿ ವಿಚಾರಣೆಗೆ ಹಾಜರಾಗಿ, ಸಂಪೂರ್ಣ ಸಹಕಾರ ನೀಡುವುದಾಗಿ ದಿಗಂತ್ ಹಾಗೂ ಐಂದ್ರಿತಾ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಬ್ಬರು, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ನೀಡಿರುವ ನೋಟಿಸ್‌ ಅನ್ನು ನಾವು ಸ್ವೀಕರಿಸಿದ್ದೇವೆ. ನಾಳೆ (ಬುಧವಾರ) ವಿಚಾರಣೆಗೆ ಹಾಜರಾಗುತ್ತೇವೆ ಎಂದು ನಟ ದಿಗಂತ್‌ ಮತ್ತು ಐಂದ್ರಿತಾ ರೈ ದಂಪತಿ ಟ್ವೀಟ್‌ ಮಾಡಿದ್ದಾರೆ.

ʻಸಿಸಿಬಿ ನೀಡಿರುವ ಟೆಲಿಫೋನಿಕ್‌ ನೋಟಿಸ್‌ ಅನ್ನು ನಾವು ಸ್ವೀಕರಿಸಿದ್ದೇವೆ. ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇವೆ. ಸಿಸಿಬಿ ವಿಚಾರಣೆಗೆ ಸಹರಿಸುತ್ತೇವೆʼ ಐಂದ್ರಿತಾ ರೈ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಡ್ರಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾರೆ.

ಅಂತೆಯೇ ನಟಿ ಸಂಜನಾ ಇನ್ನೂ ಮೂರು ದಿನಗಳ ಕಾಲ ಸಿಸಿಬಿ ವಿಚಾರಣೆಗೆ ಒಳಪಟ್ಟಿದ್ದಾರೆ. ಇದರ ಮಧ್ಯೆಯೇ ಮಂಗಳವಾರ ಮಾಜಿ ಸಚಿವ ಜೀವರಾಜ್‌ ಆಳ್ವಾ ಅವರ ಪುತ್ರ ಆದಿತ್ಯ ಆಳ್ವ ಅವರ ರೆಸಾರ್ಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version