ದೆಹಲಿಯ ತಬ್ಲೀಘಿ ಜಮಾತ್’ಗೆ ಸಂಬಂಧಿಸಿದಂತೆ 1,500 ಜನರ ಪಟ್ಟಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ಈ ಪೈಕಿ 800 ಮಂದಿಯನ್ನು ಪತ್ತೆ ಹಚ್ಚಿ ಈಗಾಗಲೇ ತಪಾಸಣೆಗೆ ಗುರಿಪಡಿಸಿದ್ದು, ರೋಗ ಲಕ್ಷಣ ಕಾಣಿಸಿಕೊಂಡ 143 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.
ಈ ಪೈಕಿ 1,500 ಮಂದಿಯೂ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಆದರೆ, ನಿಜಾಮುದ್ದೀನ್’ಗೆ ಸಂಬಂಧಿಸಿದ ಪ್ರಕರಣಗಳ ವಿವರಗಳಾಗಿ ಕೇಂದ್ರ ಸರ್ಕಾರ ಪಟ್ಟಿಯನ್ನುಕಳುಹಿಸಿಕೊಟ್ಟಿದ್ದು, ಈ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದೇವೆಂದು ತಿಳಿಸಿದ್ದಾರೆ.
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಮೂರು ಪಟ್ಟಿ ಬಂದಿವೆ. ಮಾ.8ರಿಂದ 20ರವರೆಗಿನ ಅವಧಿಯಲ್ಲಿ ರಾಜ್ಯದಿಂದ 1,500 ಮಂದಿ ನಿಜಾಮುದ್ದೀನ್’ಗೆ ಆಗಮಿಸಿರಬಹುದು ಎನ್ನಲಾದ 1,500 ಮಂದಿ ಪಟ್ಟಿ ಇದಾಗಿದ್ದು, ಈ ಪೈಕಿ 800ಮಂದಿಯನ್ನು ಈಗಾಗಲೇ ಪತ್ತೆಹಚ್ಚಿದ್ದೇವೆ. ಉಳಿದ 700 ಮಂದಿಯನ್ನು ಗುರುವಾರ ರಾತ್ರಿಯೊಳಗೆ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲಿದ್ದೇವೆ. ಇನ್ನು ತಪಾಸಣೆಗೆ ಒಳಪಡಿಸಿರುವ 800 ಮಂದಿಯಲ್ಲಿ 143 ಮಂದಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಗಂಟಲು ದ್ರವದ ಸ್ವ್ಯಾಬ್ ಅನ್ನು ಪರೀಕ್ಷೆಗೆ ರವಾನಿಸಲಾಗಿದೆ. ಅಲ್ಲದೆ ಇಷ್ಟೂಮಂದಿಯನ್ನು ಸರ್ಕಾರಿ ನಿಯಂತ್ರಣದಲ್ಲಿರುವ ಮಾಸ್ ಕ್ವಾರಂಟೈನ್’ಗೆ ಸ್ಥಳಾಂತರ ಮಾಡಲಾಗಿದೆ ಎಂದು ಎಂದಿದ್ದಾರೆ.
ಇದೇ ವೇಳೆ ಮಸೀದಿಗೆ ಭೇಟಿ ನೀಡಿದ್ದವರು ಸ್ವಯಂಪ್ರೇರಿತವಾಗಿ ಆರೋಗ್ಯ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು. ಅಲ್ಲದೆ, ಅವರಿಗಾಗಿಯೇ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿತ್ತು. ಹಲವರು 080-2911171 ಸಹಾಯವಾಣಿ ಮೂಲಕ ಸ್ವಯಂಪ್ರೇರಿತವಾಗಿ ಆಗಮಿಸಿ ಪ್ರಾಥಮಿಕ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೆ ಒಳಗಾಗುತ್ತಿದ್ದಾರೆಂದು ವಿವರಿಸಿದ್ದಾರೆ