ಹೈದರಾಬಾದ್, ಡಿ 6: ಹೈದರಾಬಾದ್ ಮೂಲದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ. ಅತ್ಯಾಚಾರಿಗಳು ಪೊಲೀಸ್ ಎನ್ ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ದೇಶದೆಲ್ಲೆಡೆ ಒಕ್ಕೊರಲಿನಿಂದ ಕೇಳಿಬಂದ ಕೂಗು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿತ್ತು. ಇದರಂತೆ ಶುಕ್ರವಾರ ಮುಂಜಾನೆ ನಡೆದ ಎನ್ ಕೌಂಟರ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗಳು ಮೃತಪಟ್ಟಿದ್ದಾರೆ.
ಗುರುವಾರವಷ್ಟೇ ಪೊಲೀಸರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ರನ್ನು ನ್ಯಾಯಾಂಗ ಬಂಧನದಿಂದ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದರು. ಸತತ ವಿಚಾರಣೆ ಬಳಿಕ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಶುಕ್ರವಾರ ಮುಂಜಾನೆ 3.30ರ ಸುಮಾರಿನಲ್ಲಿ ಹೈದರಾಬಾದ್ ಹೊರವಲಯದ ಚಟಾನ್‌ಪಲ್ಲಿ ಬ್ರಿಡ್ಜ್ ಬಳಿ ನಡೆದ ಎನ್ ಕೌಂಟರ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳು ಮೃತಪಟ್ಟಿದ್ದಾರೆ.
ವಿಶ್ವನಾಥ್ ಸಜ್ಜನರ್ ನೇತೃತ್ವದ ಅಧಿಕಾರಿಗಳ ತಂಡದ ಮೇಲೆ ಆರೋಪಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಪ್ರಯತ್ನ ನಡೆಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು. ಆಗ ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟಿನಲ್ಲಿ ಇಂತಹ ಹೀನ ಕೃತ್ಯವೆಸಗುವ ಮೂಲಕ ದೇಶವನ್ನು ಬೆಚ್ಚಿ ಬೀಳಿಸಿದ್ದ ನಾಲ್ವರು ಆರೋಪಿಗಳಿಗೆ ಇದಕ್ಕಿಂತ ತಕ್ಕ ಶಿಕ್ಷೆ ಬೇರ್ಯಾವುದೂ ಇಲ್ಲವೇನೋ ಎಂಬುದು ಜನ ಸಾಮಾನ್ಯರ ಮಾತಾಗಿದೆ.