ಕರ್ನಾಟಕದ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಂಗಡಿ ಬಾಡಿಗೆ ವಿಚಾರದಲ್ಲಿ ಕರ್ತವ್ಯಲೋಪ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇಬ್ಬರು ದೇವಸ್ಥಾನದ ನೌಕರರನ್ನು ಅಮಾನತು ಮಾಡಿದ ಘಟನೆ ನಡೆದಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿಗಳ ಬಾಡಿಗೆಯನ್ನು ವಸೂಲಿ ಮಾಡುವಲ್ಲಿ ಎಡವಿರುವುದು ಈ ಅಮಾನತಿಗೆ ಕಾರಣ ಎಂಬುದು ತಿಳಿದು ಬಂದಿದೆ. ದೇವಳದ ಆಡಳಿತ ಕಚೇರಿಯ ಸಿಬ್ಬಂದಿಗಳಾಗಿದ್ದು, ಕೇಸ್ ವರ್ಕರ್ ಗಳಾಗಿರುವ ಬಾಲಸುಬ್ರಹ್ಮಣ್ಯ ಮಾರಾರ್ ಮತ್ತು ಲೋಕೇಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಇನ್ನೊಂದು ಕಡೆಯಿಂದ ಬೇರೆಯವರು ಮಾಡಿದ ತಪ್ಪಿಗೆ ನೌಕರರನ್ನು ಬಲಿ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಮಧ್ಯೆ ದೇಗುಲಕ್ಕೆ ಸಂಬಂಧಿಸಿದ ಅಂಗಡಿಯನ್ನು ಬಾಡಿಗೆ ಪಡೆದು ಕೋಟಿಗೂ ಮಿಕ್ಕಿ ಬಾಡಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿರುವವರ ಮೇಲೆ ಪೊಲೀಸ್ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಬಾಡಿಗೆದಾರರು ತಕ್ಷಣ ಬಾಡಿಗೆ ಪಾವತಿಸುವುದಾಗಿ ತಿಳಿಸಿದ ಮೇರೆಗೆ, ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇನ್ನಷ್ಟೆ ಒದಗಿಸ ಬೇಕಾಗಿರುವುದರಿಂದ ಪ್ರಕರಣ ಇನ್ನಷ್ಟೆ ದಾಖಲಾಗಬೇಕಿದೆ.