ಬಿಸಿಯಾದ ಆಹಾರ ಪದಾರ್ಥಗಳ ಸೇವನೆಯಿಂದ ನಾಲಿಗೆ ಸುಟ್ಟುಹೋಗುವುದಂತೂ ಸಾಮಾನ್ಯ ವಿಚಾರವಾಗಿದೆ.. ಆದರೆ ಸೂಕ್ತ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ನೀಡದೇ ಹೋದರೆ ಒಂದೆರಡು ದಿನಗಳ ಕಾಲ ನಾಲಿಗೆ ಸಂವೇದನೆಯನ್ನು ಕಳೆದುಕೊಳ್ಳುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು..? ನಾಲಿಗೆ ಸುಟ್ಟ ಸಂದರ್ಭದಲ್ಲಿ ಮನೆ ಮದ್ದಿನ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾ.? ಖಂಡಿತವಾಗಿಯೂ ಸಾಧ್ಯ.
ತಣ್ಣೀರು : ಸುಟ್ಟ ಕೂಡಲೇ ತಣ್ಣಗಿನ ನೀರು ಕುಡಿಯುವದರಿಂದ ನಾಲಿಗೆ ತಣ್ಣಗಾಗುತ್ತದೆ ಹಾಗೂ ನಾಲಿಗೆಯ ಒಳಪದರಗಳಿಗೆ ಆಗಬಹುದಾದ ಇನ್ನಷ್ಟು ಸಮಸ್ಯೆಯನ್ನು ತಡೆಯುತ್ತದೆ.
ಸಕ್ಕರೆ: ಬಾಯಿ ಸುಟ್ಟುಕೊಂಡರೆ ಒಂಚೂರು ಸಕ್ಕರೆ ಅಥವಾ ಕಲ್ಲು ಸಕ್ಕರೆ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ.
ಪುದೀನಾ: ಪುದೀನಾ ಎಲೆ ಎಂದರೆ ಒಗರು ಒಗರಾಗಿರುತ್ತದೆ. ಆದರೂ ಬಾಯಿ ಸುಟ್ಟಾಗ ಪುದೀನಾ ಎಲೆಗಳನ್ನು ಜಗಿಯಿರಿ, ಕೂಡಲೇ ಸುಟ್ಟ ನೋವು ಶಮನವಾಗುತ್ತದೆ.
ಜೇನುತುಪ್ಪ: ಯಾವುದೇ ಸುಟ್ಟ ಗಾಯಕ್ಕೂ ಜೇನು ತುಪ್ಪ ಒಳ್ಳೆಯ ಮದ್ದು. ಹಾಗೆಯೇ ಬಾಯಿ ಸುಟ್ಟಿದ್ದರೂ ಜೇನು ತುಪ್ಪ ಸೇವಿಸಿದರೆ ನಾಲಿಗೆ ಸುಟ್ಟ ನೋವು ನಿವಾರಣೆಯಾಗುತ್ತದೆ.
ಮಜ್ಜಿಗೆ, ಮೊಸರು, ಹಾಲು: ಬಾಯಿ ಸುಟ್ಟುಕೊಂಡ ತಕ್ಷಣ ಮಜ್ಜಿಗೆ ಕುಡಿಯಿರಿ, ನಾಲಿಗೆ ಜತೆಗೆ ದೇಹಕ್ಕೂ ತಂಪೆನಿಸುತ್ತದೆ. ಮೊಸರು, ಹಾಲು ಸಹ ನಾಲಿಗೆಯ ಮೇಲ್ಪದರಕ್ಕೆ ತಾತ್ಕಾಲಿಕ ನೆಮ್ಮದಿ ನೀಡುತ್ತದೆ.
ಅಲೋವೇರಾ: ಅಲೋವೇರಾ ಬಾಯಿ ಉರಿ ಜತೆಗೆ, ಸಂವೇದನೆ ಕಳೆದುಕೊಂಡಿದ್ದರೂ ಅದನ್ನು ಮರಳಿ ಪಡೆಯುವುದಕ್ಕೆ ಪರಿಣಾಮಕಾರಿ ಮದ್ದು.