ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಆರೋಗ್ಯ ಸಮಸ್ಯೆಗಳ ಪೈಕಿ ಮಲಬದ್ಧತೆ ಹಾಗೂ ಗ್ಯಾಸ್ನ ಸಮಸ್ಯೆಯೂ ಒಂದು. ನಿತ್ಯವೂ ಅಜೀರ್ಣ, ವಾಂತಿ ಬೇಧಿಯುಂಟಾಗಿ, ಹೊಟ್ಟೆ ಕಿವುಚಿದಂತಾಗಿ ಮಕ್ಕಳ ಅಳುಮುಖವನ್ನು ನೋಡುವುದು ಸಮಾಧಾನಪಡಿಸುವುದು ಹೆತ್ತವರಿಗೆ ತಲೆನೋವಿನ ವಿಚಾರವಾಗಿಬಿಟ್ಟಿರುತ್ತದೆ.
ಮಗುವಿಗೇಕೆ ಅಜೀರ್ಣ ಸಮಸ್ಯೆ ಜಾಸ್ತಿ?
ನಮ್ಮ ದೇಹದಲ್ಲಿ ಈಸೋಫ್ಯಾಗಲ್ ಸ್ಫಿಂಕ್ಟರ್ ಎಂಬ ವಾಲ್ವ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಈ ವಾಲ್ವ್ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಸಂಪೂರ್ಣ ಬೆಳೆಯಲು ಒಂದು ವರ್ಷದವರೆಗೂ ಸಮಯ ತೆಗೆದುಕೊಳ್ಳಬಹುದು. ಇದು ಮಕ್ಕಳಲ್ಲಿ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಕಾರಣ.
ಇದರಿಂದಲೇ ಆ್ಯಸಿಡ್ ರಿಫ್ಲಕ್ಸ್ ಆಗುವುದು. ಇದಲ್ಲದೆ ಅಪರೂಪಕ್ಕೆ ಇನ್ಫೆಕ್ಷನ್ ಕೂಡಾ ಕಾರಣವಾಗಬಹುದು. ಇನ್ನು ನವಜಾತ ಶಿಶುವು ಹಾಲು ಕುಡಿಯುವಾಗ ಜೊತೆಗೆ ಗಾಳಿಯನ್ನೂ ಎಳೆಯುತ್ತದೆ. ಇದರಿಂದ ಮಗುವು ಪದೇ ಪದೆ ಕಕ್ಕುತ್ತದೆ. ಇನ್ನು ಮಗುವಿಗೆ ದಪ್ಪ ಆಹಾರವನ್ನು ಕೊಡಲಾರಂಭಿಸಿದಾಗ ಮಲಬದ್ಧತೆ ಕಾಡುವುದು ಸಾಮಾನ್ಯ.
ಮನೆ ಮದ್ದಿನ ಮೂಲಕ ಮಕ್ಕಳ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ
- ನಿತ್ಯವೂ ಹೊಟ್ಟೆಯ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಹೊಕ್ಕುಳಿನ ಭಾಗದಲ್ಲಿ ಎಣ್ಣೆ ಅಥವಾ ಹಳೆಯ ತುಪ್ಪವನ್ನು ಉಜ್ಜಿ ಮಸಾಜ್ ಮಾಡುತ್ತಿರಬೇಕು. ಇದರಿಂದ ಡೈಜೆಶನ್ ಸರಿಯಾದ ರೀತಿಯಲ್ಲಿ ನಡೆಯುತ್ತದೆ.
- ದಿನಕ್ಕೆ ಒಂದೆರಡು ಬಾರಿ ಸ್ವಲ್ಪ ಬೆಚ್ಚನೆಯ ನೀರಲ್ಲಿ ಬಟ್ಟೆಯನ್ನು ಅದ್ದಿ ಹಿಂಡಿ, ಬಿಸಿ ಶೇಕವನ್ನು ಮಕ್ಕಳ ಹೊಟ್ಟೆಯ ಭಾಗದಲ್ಲಿರಿಸಿದರೆ ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ಹೋಗಿ ಮಲಬದ್ಧತೆಯನ್ನು ದೂರವಿರಿಸುತ್ತದೆ.
- ದಿನಕ್ಕೆ ನಾಲ್ಕೈದು ಬಾರಿ ಬೆಚ್ಚನೆಯ ನೀರನ್ನು ಕುಡಿಸಿ.
- ಎದೆಹಾಲು ಕುಡಿಸುವಾಗ ಪೊಸಿಶನ್ ಸರಿ ಇದ್ದರೆ ಆ್ಯಸಿಡ್ ರಿಫ್ಲಕ್ಸ್ ಕಡಿಮೆ ಮಾಡಬಹುದು. ಮಲಗಿಕೊಂಡು ಕುಡಿಸುವುದು, ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಕುಡಿಸುವ ಬದಲು, ಮಗುವಿನ ತಲೆ ಸ್ವಲ್ಪ ಮೇಲಿದ್ದು, ದೇಹ ಕೆಳಗಿರುವಂತೆ ಹಿಡಿದುಕೊಳ್ಳಿ. ಆಗ ಕುಡಿದ ಹಾಲು ತಿರುಗಿ ಬಾಯಿಗೆ ಬರುವುದಿಲ್ಲ. ಹಾಲು ಕುಡಿದಾದ ಬಳಿಕ 1-2 ನಿಮಿಷದವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಆಗ ಮಗು ತೇಗುತ್ತದೆ. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ.
- ಹೆಪ್ಪಾದ ಡೈರಿ ಪದಾರ್ಥಗಳು ಮಗುವಿನಲ್ಲಿ ಗ್ಯಾಸ್ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತದೆ. ಹಾಗಾಗಿ, ಮಗು 6 ತಿಂಗಳು ದಾಟಿದ್ದರೆ ಯಾವಾಗ ಜೀರ್ಣ ಸಮಸ್ಯೆ ಕಂಡುಬಂದರೂ ಆಗ, ಸ್ವಲ್ಪ ಮೊಸರಿಗೆ ಚೂರು ನೀರು ಸೇರಿಸಿಕೊಂಡು ಕುಡಿಸಿ.
- ವೀಳ್ಯದೆಲೆಗೆ ಹರಳೆಣ್ಣೆ ಉಜ್ಜಿಕೊಂಢು ಬಿಸಿ ಮಾಡಿಕೊಳ್ಳಿ…ನಂತರ ಮಗುವಿಗೆ ಬಿಟಿ ತಡೆಯುವಷ್ಟರ ಮಟ್ಟಿಗೆ ಬಂದಾಗ ಆ ಎಲೆಯನ್ನು ಮಗುವಿನ ಹೊಕ್ಕುಳಿನ ಭಾಗಕ್ಕೆ ಮೆಲ್ಲನೆ ಮಸಾಜ್ ಮಾಡಿ..ಇದು ಗ್ಯಾಸ್ ಸಮಸ್ಯೆಗೆ ರಾಮಬಾಣ
- ತಾಯಿ ಎದೆ ಹಾಲನ್ನು ಚಮಚವೊಂದರಲ್ಲಿ ಸ್ವಲ್ಪ ಹಿಂಡಿಕೊಂಡು ಅದಕ್ಕೆ ಒಂದು ಹನಿ ಹರಳೆಣ್ಣೆ ಮಿಶ್ರ ಮಾಡಿ ಮಗುವಿಗೆ ಸೇವಿಸಲು ಕೊಡಿ.. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಕಾಣಬಹುದು. (6 ತಿಂಗಳ ಕಳೆದ ಮಕ್ಕಳಿಗೆ ಮಾತ್ರ)
ಈ ರೀತಿಯ ಮನೆ ಮದ್ದುಗಳ ಅಳವಡಿಕೆಯ ಮೂಲಕ ಮಕ್ಕಳಲ್ಲಿ ಕಂಡುಬರುವ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಮುಕ್ತಿ ಕಾಣಬಹುದು. ಇದಕ್ಕೂ ಮಿಗಿಯಾದ ಹೊಟ್ಟೆನೋವು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.