ಮುಂಬೈ,ಸೆ.09: ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ಕಳೆದೊಂದು ತಿಂಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಸಲುಗಿಹೋಗಿದೆ. ಅಲ್ಲಿನ ಬಹುತೇಕ ಜಿಲ್ಲೆಗಳು ಜಲಾವೃತಗೊಂಡಿವೆ. ಆದರೆ ಈ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮತ್ತೊಂದು ಶಾಕ್ ನೀಡುವ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸಿದ್ದಾರೆ. ಮಹಾರಾಷ್ಟ್ರ ಭಾಗದಲ್ಲಿ ಅತಿಯಾದ ಮಳೆಯ ಕಾರಣದಿಂದ ಕೊಯ್ನಾ ಜಲಾಶಯದಿಂದ ಮತ್ತಷ್ಟು ನೀರು ಹರಿಸಲಾಗುತ್ತಿದೆ. ಎಚ್ಚರಿಕೆಯಿಂದಿರಿ ಎಂಬುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕರ್ನಾಟಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ 1.70 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಎರಡು ಲಕ್ಷ ಕ್ಯೂಸೆಕ್ ಹೆಚ್ಚುವರಿ ನೀರು ಬಿಡುವ ಸಂಬಂಧ ಕರೆ ಮಾಡಿ ಫಡ್ನವಿಸ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಅಲರ್ಟ್ ಮಾಡುವಂತೆ ಫಡ್ನವೀಸ್ ಸಿಎಂಗೆ ಮನವಿ ಮಾಡಿದ್ದಾರೆ. ಇದೀಗ ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.