ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್‌ಮೆಂಟ್, ಟೆಕ್ನಾಲಜಿ ಎಂಬ 5 T ಸೂತ್ರ ಅಳವಡಿಸಿಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದಿಗೆ ಲಾಕ್ ಡೌನ್ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಯೋಚನೆ ಮಾಡದೆ ಕೊರೊನಾ ನಿಯಂತ್ರಣದ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಮಾಡುವುದಿಲ್ಲ. ಅಂತರ ಕಾಪಾಡುವುದು, ಮಾಸ್ಕ್ ಧರಿಸುವ ನಿಯಮ ಪಾಲಿಸಬೇಕು ಎಂದು ಜನರಲ್ಲಿ ಸಿಎಂ ಮನವಿ ಮಾಡಿದರು. ಕೊರೊನಾ ಸೋಂಕಿತರಲ್ಲಿ ಶೇ.೯೮ ಮಂದಿ ಗುಣಮುಖರಾಗುತ್ತಿದ್ದಾರೆ. ಹೀಗಾಗಿ, ಯಾರೂ ಕೂಡಾ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ ಎಂದ ಸಿಎಂ ಯಾರೂ ಆತ್ಮಹತ್ಯೆಯಂತಹ ತೀರ್ಮಾನಗಳನ್ನು ಕೈಗೊಳ್ಳಬಾರದೆಂದು ಮನವಿ ಮಾಡಿದರು.
ಇನ್ನು ವಿರೋಧ ಪಕ್ಷಗಳ ಮಾಡುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಈ ಸಂಕಷ್ಟದ ಸಮಯದಲ್ಲಿ ಯಾರೂ ಟೀಕೆ ಟಿಪ್ಪಣಿ ಮಾಡಬಾರದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಎಲ್ಲರೂ ಏನೇ ಮಾಹಿತಿ ಬೇಕಿದ್ದರೂ ಕೇಳಿ ಕೊಡುತ್ತೇವೆ. ಎಲ್ಲರೂ ಒಟ್ಟಾಗಿ ಕೊರೊನಾ ಎದುರಿಸೋಣ ಎಂದರು.
ಖಾಸಗಿ ಆಸ್ಪತ್ರೆಗಳು ಬೆಡ್ ನೀಡಲು ಒಪ್ಪಿಗೆ ನೀಡಿವೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಬಳಸಿದ ಹಾಸಿಗೆಗಳನ್ನು ಕಡ್ಡಾಯವಾಗಿ ಸುಡುತ್ತೇವೆ ಎಂದ ಸಿಎಂ, ಬೆಡ್ ಬಾಡಿಗೆಗೆ ಪಡೆಯುವುದನ್ನು ಬಿಟ್ಟು ಖರೀದಿಗೆ ನಿರ್ಧಾರ ಮಾಡಿದ್ದೇವೆ. ನಾಳೆಯಿಂದ ರಾಜ್ಯದ ಯಾವ ಜಿಲ್ಲೆಯಲ್ಲೂ ಲಾಕ್‍ಡೌನ್ ಇರಲ್ಲ. ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಮಾಸ್ಕ್ ಧರಿಸದಿದ್ದರೆ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಸಿಎಂ ಎಚ್ಚರಿಸಿದರು.