ಶ್ವಾನಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ಸಾಕುಪ್ರಾಣಿ. ಬುದ್ಧಿವಂತಿಕೆಯ ಜೊತೆಗೆ, ಸ್ವಾಮಿನಿಷ್ಠನೂ ಆಗಿರುವ ಶ್ವಾನಗಳು ತಮ್ಮ ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ಪ್ರಕಟಿಸುತ್ತವೆ. ನಾಯಿಗಳ ಮೇಲಿನ ಪ್ರೀತಿಗೆ ವಿಶ್ವದಾದ್ಯಂತ ದಿನವೊಂದನ್ನು ನಿಗದಿಪಡಿಸಲಾಗಿದ್ದು, ಪ್ರತಿವರ್ಷ ಅಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನಾಗಿ ಆಚರಿಲಾಗುತ್ತಿದೆ.
ಕೋಲೀನ್ ಪೇಯ್ಜ್ರಿಂದ ಅಚರಣೆ ಆರಂಭ
ಸ್ವತಃ ಶ್ವಾನಪ್ರಿಯ ಹಾಗೂ ಪ್ರಾಣಿ ನಡವಳಿಕೆ ತಜ್ಞರಾಗಿರುವ ಕೋಲೀನ್ ಪೇಯ್ಜ್ ರವರು ಈ ಆಚರಣೆಯನ್ನು 2004ರಿಂದ ಪ್ರಾರಂಭಿಸಿದರು. ಈ ದಿನವನ್ನು ಕೇವಲ ರಜಾದಿನವನ್ನಾಗಿ ಆಚರಿಸದೇ ಶ್ವಾನಗಳ ಪ್ರತಿ ತಮ್ಮ ಪ್ರೀತಿಯನ್ನು ತೋರುವ ಅವಕಾಶವೆಂದು ಆಕೆ ತಿಳಿಸುತ್ತಾರೆ. ಆದರೆ ಈ ದಿನದ ಆಚರಣೆಯ ಮಹತ್ವ ಇದಕ್ಕಿಂತಲೂ ಹೆಚ್ಚು ಗಹನವಾದ ವಿಷಯಗಳಿಗೂ ಅನ್ವಯಿಸುತ್ತದೆ. ನಿಂದನೆಗೊಳಗಾದ ನಾಯಿಗಳಿಗೆ ಆಶ್ರಯ, ಮಿಶ್ರತಳಿಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನು ನಿಲ್ಲಿಸುವುದು ಹಾಗೂ ತಳಿ-ನಿರ್ದಿಷ್ಟ ಶಾಸನವನ್ನು ನಿಯಂತ್ರಿಸುವ ಅಥವಾ ಸಂಪೂರ್ಣ ನಿಷೇಧಿಸುವುದು, ನಾಯಿಗಳ ಆಕ್ರಮಣವನ್ನು ತಡೆಯಲು ಕೆಲವು ತಳಿಗಳನ್ನು ನಿಷೇಧಿಸುವುದು ಮೊದಲಾದವು ಈ ಆಚರಣೆಯ ಇತರ ಮಹತ್ವದ ಕಾಳಜಿಗಳಾಗಿವೆ.
ಈ ದಿನವನ್ನು ಹಲವು ರೀತಿಯಲ್ಲಿ ಆಚರಿಸಬಹುದು. ಕೆಲವರು ಸರಳವಾಗಿ, ಈ ದಿನದಂದು ತಮ್ಮ ನೆಚ್ಚಿನ ನಾಯಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ, ನಾಯಿಗೆ ಇಷ್ಟವಾಗುವಂತಹ ಆಟಿಕೆ, ತಿಂಡಿಗಳನ್ನು ಕೊಡಿಸುತ್ತಾರೆ. ಇತರರು ತಮ್ಮ ಸಮಯ ಮತ್ತು ಧನವನ್ನು ಪ್ರಾಣಿದಯಾ ಸಂಸ್ಥೆಗಳಿಗೆ ವಿನಿಯೋಗಿಸುವ ಮೂಲಕ ಆಚರಿಸುತ್ತಾರೆ. ಶ್ವಾನದಿನದ ವ್ಯಾಪ್ತಿಯು ಪಾರುಗಾಣಿಕಾ ಮನೆಯಿಂದ ನಾಯಿಯನ್ನು ದತ್ತು ತೆಗೆದುಕೊಳ್ಳುವುದರಿಂದ ಹಿಡಿದು ನಿಮ್ಮ ನಾಯಿಗೆ ಸಮಗ್ರ ಸ್ಪಾ ಚಿಕಿತ್ಸೆಯನ್ನು ನೀಡುವುದು ಅಥವಾ ನಿಮ್ಮ ಮತ್ತು ನಿಮ್ಮ ನಾಯಿ ಹೊಂದಾಣಿಕೆಯ ಟೀ ಶರ್ಟ್ ಗಳನ್ನು ಖರೀದಿಸುವುದು ಮೊದಲಾದವುಗಳೂ ಸೇರಿವೆ.