ರಾಜಕೀಯದಲ್ಲಿ ಒಬ್ಬರಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಈಗಂತೂ ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಸಮ್ಮಿಶ್ರ ಸರ್ಕಾರ ಉರುಳೋದಕ್ಕೆ ಸಿದ್ದರಾಮಯ್ಯ ಕಾರಣ ಅಂತ ದೇವೇಗೌಡರು..ದೇವೇಗೌಡರು ಕಾರಣ ಅಂತ ಸಿದ್ದರಾಮಯ್ಯ..ಹೀಗೆ ಅವರವರೇ ವಾಕ್ಸಮರದಲ್ಲಿ ತೊಡಗಿದ್ದರೆ ಇತ್ತ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಇವರಿಬ್ಬರೂ ಬೆನ್ನಿಗೆ ಚೂರಿ ಹಾಕುವವರೇ ಅಂತ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನು ಬೆನ್ನಿಗೆ ಚೂರಿ ಹಾಕಿನೆ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪರಾಣೆ ಇಟ್ಟುಕೊಂಡು ಮಾತನಾಡಿದ್ರು. ಲೋಕಸಭೆಯಲ್ಲಿ ಬಾಯಿ ಬಾಯಿ ಅಂತ ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ ಮೂರುದಿನದಿಂದ ಒಬ್ಬರ ಮೇಲೋಬ್ಬರು ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಜನ ಎಲ್ಲವನ್ನು ನೋಡ್ತಿದ್ದಾರೆ. ಇವರನ್ನ ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೀರ ಈಗಲಾದ್ರು ಗಂಭೀರವಾಗಿ ಇರೋದನ್ನ ಕಲಿರಿ ಎಂದು ಸಲಹೆ ನೀಡಿದರು.
ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಎತ್ತಿ ಸಿಎಂರನ್ನ ಸಮರ್ಥಿಸಿಕೊಂಡಿದ್ದೇ ಸಿದ್ದರಾಮಯ್ಯನೇ ಅಲ್ವಾ. ಈಗ್ಯಾಕೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗಳನ್ನ ನೋಡ್ತಿದ್ರೆ ಜನರಿಗೆ ಅಸಹ್ಯವಾಗುತ್ತೆ. ಕರ್ನಾಟಕದ ಅಭಿವೃದ್ಧಿ ದೃಷ್ಠಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿ. ವಿರೋಧ ಪಕ್ಷದಲ್ಲಿ ಕುಳಿತು ಗಂಭೀರವಾಗಿ ಕೆಲಸ ಮಾಡಿ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.